ಬಾಡುತ್ತಿದ್ದ ಬೆಳೆಗಳಿಗೆ ಜೀವ ತಂದ ವರುಣ

ಅರಕಲಗೂಡು ತಾಲೂಕಿನಲ್ಲಿ ಮಳೆಯಾಗಿದ್ದರಿಂದ ತಂಬಾಕು ಬೆಳೆಗೆ ಅನುಕೂಲಕರವಾಗಿದೆ.
ಅರಕಲಗೂಡು ತಾಲೂಕಿನಲ್ಲಿ ಮಳೆಯಾಗಿದ್ದರಿಂದ ತಂಬಾಕು ಬೆಳೆಗೆ ಅನುಕೂಲಕರವಾಗಿದೆ.
Published on
ಅರಕಲಗೂಡು: ತಾಲೂಕಿನಲ್ಲಿ ಹಲವು ದಿನಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಜನರಿಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆ ಹರ್ಷ ತಂದಿದೆ. ಮಳೆ ಕೊರತೆಯಿಂದ ಆತಂಕಕ್ಕೊಳಗಾಗಿದ್ದ ರೈತರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ವರುಣನ ಸಿಂಚನವಾಗಿದ್ದು, ಹೊಲ-ಗದ್ದೆಗಳಲ್ಲಿ ಒಣಗಲಾರಂಭಿಸಿದ್ದ ಬೆಳೆಗಳಿಗೆ ಮಳೆ ಹೊಸ ಚೈತನ್ಯ ತುಂಬಿದೆ. ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಅಭಾವದಿಂದ ಹಳದಿ ಬಣ್ಣಕ್ಕೆ ತಿರುಗಿ ಒಣಗುವ ಹಂತ ತಲುಪಿದ್ದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಮಳೆ ಯಾವಾಗ ಬರುತ್ತದೆ ಎಂದು ಮುಗಿಲಿನತ್ತ ದೃಷ್ಟಿ ನೆಟ್ಟಿದ್ದರು.
ಇದೀಗ ಸುರಿದ ತುಂತುರು ಮಳೆ ಬೆಳೆಗಳಿಗೆ ಜೀವ ತುಂಬಿದಂತಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ವಿಶೇಷವಾಗಿ ಹೊಗೆಸೊಪ್ಪು, ಜೋಳ, ರಾಗಿ, ಆಲೂಗಡ್ಡೆ ಸೇರಿದಂತೆ ಮಳೆ ಆಧಾರಿತ ಬೆಳೆಗಳನ್ನು ಬೆಳೆದ ರೈತರು, ಮಳೆಯಿಂದ ನೆಮ್ಮದಿ ಕಂಡಿದ್ದಾರೆ. ಕೆರೆ-ಕಟ್ಟೆಗಳು ಮತ್ತು ಹೊಲಗಳಲ್ಲೂ ತೇವಾಂಶ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಮಳೆಯ ನಿರೀಕ್ಷೆ ಮೂಡಿದೆ.
ಆದರೆ ಕೇವಲ ತುಂತುರು ಮಳೆಯಷ್ಟೇ ಸುರಿದಿರುವುದರಿಂದ ಸಮರ್ಪಕ ಪ್ರಮಾಣದ ಮಳೆ ಇನ್ನೂ ಅಗತ್ಯವಿದೆ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ. ಮುಂದಿನ ಕೆಲವು ದಿನಗಳಲ್ಲೂ ಉತ್ತಮ ಮಳೆಯಾದರೆ ಬೆಳೆಗಳು ಸಂಪೂರ್ಣ ಚೇತರಿಸಿಕೊಳ್ಳಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ. ಒಟ್ಟಾರೆ, ಹಲವಾರು ದಿನಗಳಿಂದ ಮಾಯವಾಗಿದ್ದ ಮಳೆ ಮತ್ತೆ ಕಾಣಿಸಿಕೊಂಡಿರುವುದು ಅರಕಲಗೂಡು ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗೆ ಹೊಸ ಭರವಸೆ ತುಂಬಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net