ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲ್ ಕೆ.ಬಿ.ಇ. ಮತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಕಟ್ಟಡದ ಮೇಲೆ ಅಳವಡಿಸಿದ ಕಬ್ಬಿಣದ ಶೀಟ್ ಗಾಳಿ ಮಳೆಯಿಂದ ಕುಸಿದು ಬಿದ್ದಿರುವುದು.
ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲ್ ಕೆ.ಬಿ.ಇ. ಮತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮುಂಭಾಗ ಕಬ್ಬಿಣದ ಸರಳುಗಳ ಮೇಲೆ ಅಳವಡಿಸಿದ್ದ ಶೀಟ್ ಮಳೆ-ಗಾಳಿಗೆ ಮುರಿದಿದ್ದು, ಅದೃಷ್ಟವಶಾತ್ ಮಕ್ಕಳು ತರಗತಿಯಲ್ಲಿ ಇದ್ದುದ್ದರಿಂದ ಅನಾಹುತದಿಂದ ಪಾರಾಗಿದ್ದಾರೆ.
ಶಾಲಾ ಕಟ್ಟಡದ ಮೇಲೆ ಅಳವಡಿಸಿದ್ದ ಕಬ್ಬಿಣದ ಶೀಟ್ ಮಂಗಳವಾರ ಶಾಲೆ ನಡೆಯುತ್ತಿದ್ದ ವೇಳೆ ಗಾಳಿ-ಮಳೆಯಿಂದ ಕುಸಿದಿದ್ದು ಶಿಕ್ಷಕರು ಹಾಗೂ ಮಕ್ಕಳು ಆತಂಕಕ್ಕೆ ಒಳಗಾಗಿದ್ದಾರೆ.
ಘಟನೆಯ ಬಳಿಕ ಶಾಲಾ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು ಹಾಗೂ ಪಾಲಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ವಹಿಸಬೇಕು. ಈ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಶಾಲಾ ಕಟ್ಟಡವನ್ನು ತುರ್ತಾಗಿ ದುರಸ್ತಿ ಮಾಡಿ ಮಕ್ಕಳ ಹಿತರಕ್ಷಣೆಗೆ ಒತ್ತು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶಂಶುದ್ದೀನ್ ಪುತ್ತು, ಎಸ್‌ಡಿಪಿಐ ಹಾಸನ ಜಿಲ್ಲಾ ಕೋಶಾಧಿಕಾರಿ ಸಾಹುಲ್, ಜಿಲ್ಲಾ ಸಹ ಕಾರ್ಯದರ್ಶಿ ಇಲ್ಯಾಸ್, ಗಿರೀಶ್, ಅಬ್ದುಲ್ ರೆಹಮಾನ್, ಶಾಲೆಯ ಶಿಕ್ಷಕರಾದ ಅಶೋಕ್, ಸಮದ್ ಮತ್ತು ಸಮೀರ್ ಇದ್ದರು.