ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ಹಾಗೂ ಶ್ರೀ ಚನ್ನಬಸವೇಶ್ವರಸ್ವಾಮಿ ದೇಗುಲದ ಗರ್ಭ ಗುಡಿಗೆ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮುನ್ನ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
Published on:
Copied
Follow Us
ಬೇಲೂರು : ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ಹಾಗೂ ಶ್ರೀ ಚನ್ನಬಸವೇಶ್ವರಸ್ವಾಮಿ ದೇಗುಲದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ದೇವರ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಶುಕ್ರವಾರ ಪ್ರತಿಷ್ಠಾಪಿಸಲಾಯಿತು.
ಹೆಬ್ಬಾಳು ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ಹಾಗೂ ಶ್ರೀ ಚನ್ನಬಸವೇಶ್ವರಸ್ವಾಮಿ ದೇಗುಲವು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಕಳೆದ ವರ್ಷ ದೇಗುಲದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, 2 ಕೋಟಿ ರೂ., ವೆಚ್ಚದಲ್ಲಿ ದೇಗುಲದ ನಿರ್ಮಾಣ ಕಾರ್ಯ ಬರದಿಂದ ನಡೆಯುತ್ತಿದೆ. ಶೇ.40 ರಷ್ಟು ಕಾಮಗಾರಿ ಮುಗಿದಿದ್ದು, ಗರ್ಭ ಗುಡಿಯ ಪೀಠದಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮುನ್ನ ಚಿನ್ನ, ಬೆಳ್ಳಿ, ಹವಳ, ತಾಮ್ರ ಸೇರಿದಂತೆ ಅವಶ್ಯಕವಾದ ವಸ್ತುಗಳನ್ನು ಸಂಪ್ರದಾಯದಂತೆ ಕೆಳ ಭಾಗದಲ್ಲಿ ಹಾಕಲಾಯಿತು. ನಂತರ ದೊಡ್ಡ ಕ್ರೇನ್ ಬಳಸಿ ದೇವರ ವಿಗ್ರಹವನ್ನು ಪೀಠದ ಮೇಲೆ ಜಗದೀಶ ಶಾಸ್ತ್ರಿ, ಮನು ದೀಕ್ಷಿತ್, ದಯಾನಂದ್ ಶಾಸ್ತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
ದೇಗುಲದ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೂ ವಿಗ್ರಹಳಿಗೆ ಯಾವುದೇ ರೀತಿ ಹಾನಿಯಾಗಬಾರದೆಂದು ಗ್ರಾಮದ ಭಕ್ತರು ತಂದಿದ್ದ ಭತ್ತ, ರಾಗಿ, ನವಗ್ರಹ ಧಾನ್ಯಗಳನ್ನು ಸುರಿದು ಮರದ ಹಲಗೆ ಮೂಲಕ ಮುಚ್ಚಲಾಯಿತು.
ದೇಗುಲ ಸಮಿತಿ ಅಧ್ಯಕ್ಷ ವಿಘ್ನೇಶಯ್ಯ ಮಾತನಾಡಿ, 600 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಲ್ಲೇಶ್ವರಸ್ವಾಮಿ ಮತ್ತು ಶ್ರೀ ಚನ್ನಬಸವೇಶ್ವರಸ್ವಾಮಿ ದೇಗುಲ ಶಿಥಿಲವಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಸೇರಿ ದೇಗುಲ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದೇವೆ. ಈ ಕಾರ್ಯಕ್ಕೆ ಗ್ರಾಮಸ್ಥರು, ದಾನಿಗಳ ಸಹಕಾರ ಮುಖ್ಯವಾಗಿದೆ. 2027ಕ್ಕೆ ದೇಗುಲವನ್ನು ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಸರ್ವರು ಸಹಾಯಹಸ್ತ ನೀಡಿ ದೇವರ ಕೃಪೆಗೆ ಪಾತ್ರರಾಗಬೇಕೆಂದರು.