ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ

ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ  ಅಂಗವಾಗಿ ‘ಬಾಲ್ಯ ವಿವಾಹ ಮುಕ್ತ ಹಾಸನ’ ಶೀರ್ಷಿಕೆಯಡಿ ಆಯೋಜಿಸಿದ್ದ  ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿಇಒ ಬಿ.ಆರ್.ಪೂರ್ಣಿಮಾ, ಕೆ.ಜಿ. ದಿಲೀಪ್, ಡಿವೈಎಸ್ಪಿ ಗಂಗಾಧರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಧರಣಿ ಕುಮಾರ್, ಕಾಂತರಾಜು  ಇತರರಿದ್ದರು.
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಅಂಗವಾಗಿ ‘ಬಾಲ್ಯ ವಿವಾಹ ಮುಕ್ತ ಹಾಸನ’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿಇಒ ಬಿ.ಆರ್.ಪೂರ್ಣಿಮಾ, ಕೆ.ಜಿ. ದಿಲೀಪ್, ಡಿವೈಎಸ್ಪಿ ಗಂಗಾಧರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಧರಣಿ ಕುಮಾರ್, ಕಾಂತರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ
  • ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಆತಂಕ
  • ಕಾನೂನು ಅರಿವು, ಜಾಗೃತಿ ಕಾರ್ಯಕ್ರಮ
ಹಾಸನ: ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಜಾಗೃತಿ ಮೂಡಿಸುವ ಪ್ರಮುಖ ಜವಾಬ್ದಾರಿ ಪಿಡಿಒಗಳ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಬಾಲ್ಯ ವಿವಾಹಮುಕ್ತ ಭಾರತ ಅಭಿಯಾನ ಅಂಗವಾಗಿ ‘ಬಾಲ್ಯ ವಿವಾಹಮುಕ್ತ ಹಾಸನ’ ಶೀರ್ಷಿಕೆಯಡಿ ಮಂಗಳವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಗ್ರಾಮ ಮಟ್ಟದಲ್ಲೇ ಜಾಗೃತಿ ಮೂಡಿಸುವ ಜವಾಬ್ದಾರಿ ಪಿಡಿಒಗಳದ್ದು. ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಗ್ರಾಮ ಸಭೆಗಳು, ಮಕ್ಕಳ ಗ್ರಾಮಸಭೆಗಳು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗುತ್ತಿರುವುದು ಬೇಸರದ ಸಂಗತಿ. ಕಾನೂನು ಅರಿವಿಲ್ಲದೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮನೆ ಬಿಟ್ಟು ಹೋಗುವುದು, ದೈಹಿಕ ಸಂಪರ್ಕ ಹೊಂದುವುದು ಮುಂತಾದ ಘಟನೆಗಳು ನಡೆಯುತ್ತಿವೆ. ಇದರಿಂದ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳು ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಯುವಜನತೆಗೆ ಕಾನೂನು ತಿಳಿವಳಿಕೆ ನೀಡುವುದು ಅಗತ್ಯ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಜಿ.ದಿಲೀಪ್ ಮಾತನಾಡಿ, ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ, ಕಿರುಕುಳ ಅಥವಾ ಹಿಂಸೆ ಕಂಡುಬಂದಲ್ಲಿ ತಕ್ಷಣ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಮಕ್ಕಳ ಸಮಸ್ಯೆಗಳ ಬಗ್ಗೆ ಮುತುವರ್ಜಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲ ಮನು, ಡಿವೈಎಸ್ಪಿ ಗಂಗಾಧರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಧರಣಿ ಕುಮಾರ್, ಕಾಂತರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net