ವೈದ್ಯ ವೃತ್ತಿಯಲ್ಲಿ ಹಣ ಗೌಣವಾಗಲಿ ಸೇವೆ ಧ್ಯೇಯವಾಗಲಿ

ಹಾಸನ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ‘ಹಾಸನ್ ಮೆಡಿಕಲ್ ಐಕಾನ್ ಅವಾರ್ಡ್ 2026’ನೀಡಿ ಗೌರವಿಸಲಾಯಿತು.
ಹಾಸನ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ‘ಹಾಸನ್ ಮೆಡಿಕಲ್ ಐಕಾನ್ ಅವಾರ್ಡ್ 2026’ನೀಡಿ ಗೌರವಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯ ವೃತ್ತಿಯಲ್ಲಿ ಹಣ ಗೌಣವಾಗಲಿ ಸೇವೆ ಧ್ಯೇಯವಾಗಲಿ
  • ಡಾ.ಜಯಚಂದ್ರ ಗುಪ್ತ ಅನಿಸಿಕೆ
  • ಸಾಧಕರಿಗೆ ‘ಹಾಸನ್ ಮೆಡಿಕಲ್ ಐಕಾನ್ ಅವಾರ್ಡ್’ ಪ್ರದಾನ

ಹಾಸನ:

ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ರೋಗಿಗಳ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟೇ ಪುಣ್ಯದ ಕಾರ್ಯ ಎಂದು ಹಿರಿಯ ವೈದ್ಯ ಡಾ.ಜಯಚಂದ್ರ ಗುಪ್ತ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ‘ಹಾಸನ್ ಮೆಡಿಕಲ್ ಐಕಾನ್ ಅವಾರ್ಡ್ 2026’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯನ್ನು ಆದಾಯದ ಮೂಲವೆಂದು ಪರಿಗಣಿಸದೆ ಸಮಾಜ ಸೇವೆಯಾಗಿ ಸ್ವೀಕರಿಸಿದಾಗ ಮಾತ್ರ ಅದರ ಮೌಲ್ಯ ಉಳಿಯುತ್ತದೆ ಎಂದರು.

ವೈದ್ಯರು ಹಣ ಸಂಪಾದನೆಯನ್ನು ಗುರಿಯಾಗಿಸದೆ ಮಾನವೀಯತೆ, ಕರುಣೆ ಮತ್ತು ಸೇವಾಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಲ್ಲಿಸಿರುವ ಅಪೂರ್ವ ಸೇವೆಯನ್ನು ಪರಿಗಣಿಸಿ ಹಿರಿಯ ವೈದ್ಯರಾದ ಡಾ. ಜಯಚಂದ್ರ ಗುಪ್ತ, ಹಿರಿಯ ಸ್ತ್ರೀರೋಗ ತಜ್ಞೆ ಡಾ.ಹೇಮಲತಾ, ಎಸ್ಡಿಎಂ ಆಯುರ್ವೇದ ಕಾಲೇಜಿನ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್, ಡಾ. ಲಿಂಗರಾಜು ಹಾಗೂ ಡಾ. ಕೃಷ್ಣೇಗೌಡ ಅವರಿಗೆ ‘ಹಾಸನ್ ಮೆಡಿಕಲ್ ಐಕಾನ್ ಅವಾರ್ಡ್’ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಣಕಾಸು ಮತ್ತು ಲೆಕ್ಕಪರಿಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಗಣ್ಯರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ದಿ ಗ್ರಾೃಂಡ್ ಮಾಸ್ಟರ್ ಆಫ್ ಅಕೌಂಟೆನ್ಸಿ’ ಪ್ರಶಸ್ತಿಯನ್ನು ಹಾಸನದ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಮಾಜಿ ಜಿಲ್ಲಾ ಗವರ್ನರ್ ರೊ. ಬಿ.ಎನ್.ರಮೇಶ್ ಅವರಿಗೆ ಪ್ರದಾನ ಮಾಡಲಾಯಿತು.

ಇದೇ ವೇಳೆ ‘ದಿ ಫೈನಾನ್ಷಿಯಲ್ ಮಾಸ್ಟ್ರೋ’ ಪ್ರಶಸ್ತಿಯನ್ನು ಹಿರಿಯ ಲೆಕ್ಕ ಪರಿಶೋಧಕ ಡಿ.ಎಂ.ಜಲೇಂದ್ರ, ಕೆ.ಸುಮಾ, ವಿನಯ್ ಅವರಿಗೆ ನೀಡಿ ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಕಿರಿಯ ತಲೆಮಾರಿನ ವೈದ್ಯರಿಗೆ ‘ದಿ ಹೀಲಿಂಗ್ ಹ್ಯಾಂಡ್ಸ್ ಅವಾರ್ಡ್’ ನೀಡಿ ಪ್ರೋತ್ಸಾಹಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಯುವ ವೈದ್ಯರ ಕೊಡುಗೆಯನ್ನು ಗಣ್ಯರು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ಚಿರಂತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರೊ.ಪಾಲಾಕ್ಷ, ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನದ ಅಧ್ಯಕ್ಷ ರೊ. ಡಾ. ಜಿ.ಎನ್.ಬಸವರಾಜು, ರೊ.ಯತೀಶ್, ರೊ.ಹೇಮಂತ್ ಕುಮಾರ್, ಸಹಾಯಕ ಪ್ರಾಂತಪಾಲ ಮಂಜುನಾಥ್, ಮಹೇಶ್, ಬಿ.ಡಿ. ಶಂಕರೇಗೌಡ, ಲತಾ ಚಂದ್ರಶೇಖರ್, ಹೇಮಂತ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net