ಬಾಣಾವರದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡಕ್ಕೆ ತಡೆ
ಅರಸೀಕೆರೆ ಗ್ರಾಮಾಂತರದ ಬಾಣಾವರ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ನೀಲಕಂಠ, ಲಕ್ಷೀಶ, ಪ್ರಕಾಶ್, ದಾದಪೀರ್, ಭಾಸ್ಕರ್, ಕಿಟ್ಟಿ, ಕೋಟೆ ಹರೀಶ್, ಮಂಜುನಾಥ್ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವುದು ಹೆಚ್ಚಾಗಿದ್ದು, ಅವುಗಳನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಮುಂದಾಗಿದೆ.
ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಆಸ್ತಿಯನ್ನು ವ್ಯಕ್ತಿಯೊಬ್ಬರು ತಮ್ಮ ಕಟ್ಟಡದೊಂದಿಗೆ ಪಟ್ಟಣ ಪಂಚಾಯಿತಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿ ಕಟ್ಟಡ ನಿರ್ಮಿಸಿ ಆರ್‌ಸಿಸಿ ಹಾಕಲು ಸಿದ್ಧತೆ ಮಾಡಿಕೊಂಡಿದ್ದರು. ಸಾರ್ವಜನಿಕರು, ಸಂಘ, ಸಂಸ್ಥೆಗಳ ಮುಖಂಡರು ಜಾಗೃತರಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೀಲಕಂಠ ಅವರ ಗಮನಕ್ಕೆ ತಂದು ಭಾನುವಾರ ಕಾಮಗಾರಿ ನಡೆಸುತ್ತಿದ್ದ ವೇಳೆ ತಡೆಯಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೀಲಕಂಠ ಮಾತನಾಡಿ, ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ನಿರ್ಮಿಸಲು ಹೊರಟಿರುವ ಕಟ್ಟಡ ಸಾರ್ವಜನಿಕರ ಓಡಾಟಕ್ಕಿರುವ ಗಲ್ಲಿ ಎಂದು ತೋರಿಸುತ್ತದೆ. ನಿರ್ಮಿಸುತ್ತಿರುವ ಜಾಗ ಪಟ್ಟಣ ಪಂಚಾಯಿತಿಗೆ ಸೇರಿದೆ.
ಚಕ್ಕುಬಂದಿಯಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಆದ್ದರಿಂದ ಗ್ರಾಮಸ್ಥರು, ಸಂಘ, ಸಂಸ್ಥೆಗಳ ಸಹಕಾರದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು ಈ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಹೇಳಿದರು.
ಮುಖಂಡರಾದ ಬಿ.ಆರ್.ಲಕ್ಷ್ಮೀಶ್, ಟಿ.ಎಲ್.ಪ್ರಕಾಶ್, ದಾದಾಪೀರ್, ಬಿ.ಜೆ.ಭಾಸ್ಕರ್, ಆಟೋ ಕಿಟ್ಟಿ, ಮಂಜುನಾಥ್, ಸರ್ವೇ ಕೊಪ್ಪಲು ಮಂಜಪ್ಪ, ರಮೇಶ್, ಕೋಟೆ ಹರೀಶ್ ಇತರರು ಇದ್ದರು.