ಚನ್ನರಾಯಪಟ್ಟಣ ತಾಲೂಕು ಎ.ಚೋಳೆನಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ.ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಪಿ. ತೇಜಸ್ವಿನಿ, ಪುಟ್ಟಸ್ವಾಮಿ ಇದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಸ್ಥಾಪನೆಗೆ ಒತ್ತು
ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ
ಎ.ಚೋಳೇನಹಳ್ಳಿಯಲ್ಲಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾದರೆ ಜನರು ನಗರ ಪ್ರದೇಶಗಳಿಗೆ ಅಲೆಯುವುದು ತಪ್ಪುತ್ತದೆ. ಆದ್ದರಿಂದ ಆಯುಷ್ಮಾನ್ ಆರೋಗ್ಯ ಮಂದಿರ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಎ.ಚೋಳೇನಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ.ವೆಚ್ಚದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಸ್ಥರಿಗೆ ಸ್ಥಳೀಯವಾಗಿಯೇ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಮಂದಿರ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೂ ದಡದಳ್ಳಿ, ಅಡಗೂರು, ಸಾಸಲಪುರ, ಮಳ್ಳೆನಹಳ್ಳಿ ಜನರು ಪಟ್ಟಣಗಳಿಗೆ ಹೋಗುವುದನ್ನು ತಪ್ಪಿಸಲು ಇಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು, ಸುಸಜ್ಜಿತ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.
ಗ್ರಾಮದ ಮಧ್ಯಭಾಗದಲ್ಲಿ ನಾಲ್ಕು ಪಥದ ರಸ್ತೆ ಹಾದು ಹೋಗುತ್ತಿರುವುದರಿಂದ ಆರೋಗ್ಯ ಮಂದಿರವನ್ನು ಗ್ರಾಮದ ಒಳಭಾಗದಲ್ಲಿ ನಿರ್ಮಿಸಲಾಗುತ್ತಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ 37 ಆಯುಷ್ ಕೇಂದ್ರಗಳು ಮಂಜೂರಾಗಿದ್ದು ಆರೋಗ್ಯ ಕ್ಷೇತ್ರದ ಸೌಲಭ್ಯಗಳ ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮಸ್ಥರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎನ್ನುವುದು ನಮ್ಮ ಕಾಳಜಿ ಎಂದರು.
ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು. 10 ಲಕ್ಷ ರೂ. ಅನುದಾನ ಒದಗಿಸಿ ಪೂರ್ಣಗೊಳಿಸಲಾಗುವುದು ಸಮುದಾಯ ಭವನ ಪೂರ್ಣಗೊಂಡರೆ ಗ್ರಾಮಸ್ಥರ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಪಿ.ತೇಜಸ್ವಿನಿ, ಆರೋಗ್ಯ ಇಲಾಖೆ ಇಂಜಿನಿಯರ್ ಪುಟ್ಟಸ್ವಾಮಿ ಇತರರು ಇದ್ದರು.