ಬೇಲೂರು: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪಿ.ಡಿ.ಚಂದ್ರಶೇಖರ್ ಹಗರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರ ವೃತ್ತಿಯಲ್ಲಿ ತೊಡಗಿರುವವರಿಗೆ ಗುರುತಿನ ಕಾರ್ಡ್ ಅಗತ್ಯವಿದೆ. ಈ ಕಾರ್ಡ್‌ಗಳ ಮೂಲಕ ವೃತ್ತಿ ಪರತೆಗೆ ಮತ್ತಷ್ಟು ಗೌರವ ಮತ್ತು ಭದ್ರತೆ ಸಿಗಲಿದೆ. ಇಂದು ಛಾಯಾಗ್ರಹಣ ಕ್ಷೇತ್ರವು ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ವೇಗವಾಗಿ ಬೆಳೆಯುತ್ತಿದೆ. ಮದುವೆ, ಸಾಮಾಜಿಕ ಕಾರ್ಯಕ್ರಮಗಳು, ಸುದ್ದಿ, ವರದಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಛಾಯಾಗ್ರಾಹಕರ ಪಾತ್ರ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಸಂಘದ ಸದಸ್ಯರು ಏಕತೆ ಮತ್ತು ಶಿಸ್ತಿನಿಂದ ಕೆಲಸ ಮಾಡುವುದು ಅಗತ್ಯವಾಗಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಹೊಳ್ಳ ಮಾತನಾಡಿ, ಸದಸ್ಯರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಪಘಾತ ವಿಮೆ, ತುರ್ತು ನಿಧಿ, ತರಬೇತಿ ಶಿಬಿರ ಹಾಗೂ ನವೀನ ತಂತ್ರಜ್ಞಾನಗಳ ಪರಿಚಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಹೊಸದಾಗಿ ಕ್ಷೇತ್ರಕ್ಕೆ ಬರುತ್ತಿರುವ ಯುವ ಛಾಯಾಗ್ರಾಹಕರಿಗೆ ಮಾರ್ಗದರ್ಶನ ನೀಡುವುದು ಸಂಘದ ಪ್ರಮುಖ ಗುರಿಯಾಗಿದೆ ಎಂದರು.
ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎ.ಬಿ .ಪ್ರಕಾಶ್, ಉಪಾಧ್ಯಕ್ಷ, ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸಂದೀಪ್, ಖಜಾಂಚಿ ನವೀನ್, ಕಾರ್ಯಕಾರಿ ಸಮಿತಿ ಸದಸ್ಯರು, ನಿರ್ದೇಶಕರು ಇದ್ದರು.