30ರಂದು ಲಾಟರಿ ಮೂಲಕ ಮನೆ ವಿತರಣೆ

ಕೆ.ಎಂ.ಶಿವಲಿಂಗೇಗೌಡ
ಕೆ.ಎಂ.ಶಿವಲಿಂಗೇಗೌಡ
Published on
ಅರಸೀಕೆರೆ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸುಬ್ರಹ್ಮಣ್ಯ ನಗರ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ 1,181 ಮನೆಗಳ ಪೈಕಿ 328 ಪೂರ್ಣಗೊಂಡಿದ್ದು ಮಾ.30ರಂದು ಲಾಟರಿ ಮೂಲಕ ವಿತರಿಸಲಾಗುವುದು ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕೇಂದ್ರ, ರಾಜ್ಯ ಸರ್ಕಾರ ಹಾಗೂ ಫಲಾನುಭವಿಗಳ ವಂತಿಗೆ ಹಣದಿಂದ 1,181 ಜಿ+1ಗುಂಪು ಮನೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಗಿದೆ. ಈ ಪೈಕಿ 328 ಪೂರ್ಣಗೊಂಡಿದ್ದು, ಸಕಲ ರೀತಿಯಲ್ಲಿ ವಾಸಯೋಗ್ಯವಾಗಿವೆ. ಈಗಾಗಲೇ 160 ಫಲಾನುಭವಿಗಳು ಬ್ಯಾಂಕ್ ಮೂಲಕ ಹಾಗೂ ಇನ್ನುಳಿದ 75 ಜನರು ಸ್ವಂತ ಹಣ ಪಾವತಿ ಮಾಡಿದ್ದು 235 ಜನರಿಗೆ ಮನೆಗಳ ಹಸ್ತಾಂತರಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ, 93 ಫಲಾನುಭವಿಗಳು ಈವರೆಗೂ ವಂತಿಗೆ ಕಟ್ಟಿಲ್ಲ. ಸ್ವಂತ ಮನೆ ಹೊಂದುವ ಅವಕಾಶ ಮುಂದಿದ್ದು ಮಾ.30ರೊಳಗೆ ನಿಗದಿತ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡಿದ್ದಲ್ಲಿ 328 ಫಲಾನುಭವಿಗಳು ಸೂರು ತಮ್ಮದಾಗಿಸಿಕೊಳ್ಳಬಹುದು. ಪೌರಾಯಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸುವ ಮೂಲಕ ಮಾಹಿತಿ ನೀಡಬೇಕು ಎಂದು ಭಾನುವಾರ ನಗರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೂಚನೆ ನೀಡಿದರು.
ವಸತಿ ರಹಿತರ ಹಿತ ಮನಗಂಡು ಕ್ಷೇತ್ರಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಸಹಸ್ರಾರು ಮನೆ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಸುಬ್ರಹ್ಮಣ್ಯ ನಗರ ಬಡಾವಣೆಯಲ್ಲಿ 1,181 ಮನೆ ಕಟ್ಟುವ ಕೆಲಸಕ್ಕೆ ಚುರುಕು ನೀಡಲಾಗಿದೆ. 328 ಪೂರ್ಣಗೊಂಡಿದ್ದು, 412 ಮನೆಗಳಿಗೆ ಛಾವಣಿ ಹಾಕಲಾಗಿದೆ. ಇನ್ನುಳಿದ 252 ತಳಪಾಯ ಹಂತದಲ್ಲಿದೆ. ವಸತಿ ಯೋಜನೆ ಲಾಭ ಪಡೆಯಲು ಬಯಸುವ ಫಲಾನುಭವಿಗಳು ತಮ್ಮ ಪಾಲಿನ ಹಣ ತುಂಬಿದರೆ ಎಲ್ಲರಿಗೂ ಸೂರು ಯೋಜನೆ ತ್ವರಿತಗತಿಯಲ್ಲಿ ಸಾಕಾರಗೊಳ್ಳಲಿದೆ. ಸರ್ಕಾರಗಳ ಜತೆಗೆ ಜನರೂ ಕೈಜೋಡಿಸಿದರೆ ಹೋರಾಟಕ್ಕೆ ಫಲ ದೊರೆಯಲಿದೆ ಎಂದು ಹೇಳಿದರು.
ಕಂತೇನಹಳ್ಳಿ ಕೆರೆ ಅಂಗಳದ ಉದ್ಯಾನದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈಜುಕೊಳವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗಿದೆ. ದುಬಾರಿ ಬೆಲೆ ತೆತ್ತು ಹೊರಗೆ ಹೋಗುವ ಬದಲು ಸರ್ಕಾರದ ಕೊಡುಗೆ ಬಳಕೆ ಮಾಡಿಕೊಳ್ಳಿ. ವಾರ್ಷಿಕ ಒಂದು ಸಾವಿರ ರೂ. ಪಾವತಿಸಿ ಪ್ರಯೋಜನ ಪಡೆಯಿರಿ ಎಂದು ಮನವಿ ಮಾಡಿದರು.
ಪೌರಾಯಕ್ತ ಕೃಷ್ಣಮೂರ್ತಿ, ಎಇಇ ಜಗದೀಶ್, ಆಶ್ರಯ ಸಮಿತಿ ಸದಸ್ಯರಾದ ಶ್ರೀನಿವಾಸ್ ಪಾಪಣ್ಣಿ, ಅಮ್ಜಾದ್ ಪಾಷಾ, ನೌಕರ ಚಂದನ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net