ಅರಸೀಕೆರೆ ಪಟ್ಟಣದ ಕಾಂತರಾಜು ಅವರ ಮಳಿಗೆಯ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿ ಅಕ್ಕಪಕ್ಕದ ಅಂಗಡಿಗಳಿಗೂ ಹಾನಿಯುಂಟು ಮಾಡಿದೆ. ಕೆಳ ಅಂತಸ್ತಿನಲ್ಲಿ ಹೊತ್ತಿಕೊಂಡ ಬೆಂಕಿಯು ಮೇಲ್ಭಾಗದ ಅಂಗಡಿಗೆ ತಗುಲದಂತೆ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಜ್ವಾಲೆಯ ತೀವ್ರತೆ ಹೆಚ್ಚಿದ್ದರಿಂದ ಸಾಧ್ಯವಾಗಲಿಲ್ಲ. 20 ನಿಮಿಷಕ್ಕೂ ಹೆಚ್ಚು ಕಾಲ ಹೊತ್ತಿ ಹುರಿದ ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂ. ಮೌಲ್ಯದ ಹಾಸಿಗೆ, ರೆಫ್ರಿಜಿರೇಟರ್, ವಾಷಿಂಗ್‌ಮಷಿನ್ ಸೇರಿದಂತೆ ಇನ್ನಿತರ ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಶೇ 60 ರಷ್ಟು ಸಾಮಗ್ರಿ ಹಾನಿಯಾಗಿತ್ತು.