ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಶೆಟ್ಟಿಹಳ್ಳಿ ಹಾಲು ಶೀಥಲೀಕರಣ ಘಟಕದಲ್ಲಿ ಹಾಲು ಉತ್ಪಾದಕರಿಗೆ ಮ್ಯಾಟ್‌ಗಳನ್ನು ಶಾಸಕ ಸಿ.ಎನ್ .ಬಾಲಕೃಷ್ಣ ವಿತರಿಸಿದರು. ವಸಂತಾ ಶಿವಣ್ಣ, ಶಿವಣ್ಣ, ಒಳಗೇರಳ್ಳಿ ಮಂಜಣ್ಣ ಇತರರು ಇದ್ದರು.
ಚನ್ನರಾಯಪಟ್ಟಣ: ರೈತರು ಕೊಟ್ಟಿಗೆಯಲ್ಲಿ ಮ್ಯಾಟ್‌ಗಳನ್ನು ಅಳವಡಿಸುವುದರಿಂದ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿದೆ. ಇದರಿಂದ ಹಸುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಹೆಚ್ಚಿಸಬಹುದಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಶೆಟ್ಟಿಹಳ್ಳಿ ಹಾಲು ಶೀತಲೀಕರಣ ಘಟಕದಲ್ಲಿ ಶನಿವಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಲು ಉತ್ಪಾದಕ ಸದಸ್ಯರಿಗೆ ಮ್ಯಾಟ್‌ಗಳನ್ನು ವಿತರಿಸಿ ಮಾತನಾಡಿದರು. ರೈತರು ಪಶುಸಂಗೋಪನೆಯಲ್ಲಿ ಉತ್ತಮ ಲಾಭ ಗಳಿಸಬೇಕಾದರೆ ರಾಸುಗಳ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಟ್ಟಿಗೆ ಶುಚಿಯಾಗಿ ಇಟ್ಟುಕೊಳ್ಳಲು ಮ್ಯಾಟ್‌ಗಳ ಸಹಕಾರಿಯಾಗಲಿವೆ ಎಂದರು.
ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಹಾಸನ ಹಾಲು ಒಕ್ಕೂಟ 2ನೇ ಸ್ಥಾನದಲ್ಲಿದ್ದು, ಚನ್ನರಾಯಪಟ್ಟಣ ತಾಲೂಕು ರಾಜ್ಯದಲ್ಲೇ 4ನೇ ಸ್ಥಾನ ಪಡೆದಿದೆ. ಡೇರಿ ಉದ್ಯಮದ ಬೆಳವಣಿಗೆಗೆ ರೇವಣ್ಣ ಕೊಡುಗೆ ಅಪಾರವಾಗಿದೆ. ಜಿಲ್ಲೆಯ ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಅವರ ದೂರದೃಷ್ಟಿಯೇ ಕಾರಣ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೆಗಾ ಡೈರಿ ಉದ್ಘಾಟನೆಯಾಗಲಿದ್ದು, ಪ್ರಧಾನ ಮಂತ್ರಿಗಳ ದಿನಾಂಕದ ನಿರೀಕ್ಷೆಯಲ್ಲಿದ್ದೇವೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಸಮಾಲೋಚಿಸಲಾಗಿದೆ ಎಂದರು.
ತಾಲೂಕಿನ 280 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 1.5 ಕೋಟಿ ರೂ. ವೆಚ್ಚದಲ್ಲಿ 6000 ಮ್ಯಾಟ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕಿ ವಸಂತಾ ಶಿವಣ್ಣ, ಮುಖಂಡರಾದ ಶಿವಣ್ಣ, ಒಳಗೇರಳ್ಳಿ ಮಂಜಣ್ಣ, ಹಾಲು ಶೀಥಲೀಕರಣ ಘಟಕದ ಸಹಾಯಕ ವ್ಯವಸ್ಥಾಪಕರಾದ ಎಂ. ದಯಾನಂದ, ಸಿ.ಸಿ.ಯೋಗೀಶ್, ಟಿ.ಕೃಷ್ಣಮೂರ್ತಿ, ವಿಸ್ತರಣಾಧಿಕಾರಿಗಳಾದ ವಿದ್ಯಾ, ಪ್ರಶಾಂತ್, ಘಟಕದ ಸಿಬ್ಬಂದಿ ಹಾಗೂ ರೈತರು ಇದ್ದರು.