ಚನ್ನರಾಯಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಹೈಟೆಕ್ ಶೌಚಗೃಹವನ್ನು ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಕೋಟೆ ಮೋಹನ್, ಅನಿಲ್ ಮರಗೂರು, ಆರ್.ಯತೀಶ್ ಕುಮಾರ್, ಬಸವರಾಜು, ಗಿರೀಶ್, ಮೂರ್ತಿ ಇದ್ದರು.
ಚನ್ನರಾಯಪಟ್ಟಣ : ಕ್ರೀಡಾಪಟುಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಶೌಚಗೃಹಗಳನ್ನು ಸಾರ್ವಜನಿಕರು ಸರಿಯಾಗಿ ಬಳಸಿ, ಸ್ವಚ್ಛತೆ ಕಾಪಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ, ಪುರಸಭೆ ವತಿಯಿಂದ 2024-25ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಿರುವ ಹೈಟೆಕ್ ಶೌಚಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶುಚಿತ್ವ ಕಾಪಾಡುವ ದೃಷ್ಟಿಯಲ್ಲಿ ಮತ್ತು ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ 66 ಲಕ್ಷ ರೂ. ಅನುದಾನದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆ. ತಾಲೂಕು ಕ್ರೀಡಾಂಗಣ ಅಭಿವೃದ್ಧಿಯಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಜನರು ಕ್ರೀಡಾ ಚಟುವಟಿಕೆ, ವ್ಯಾಯಾಮ ಹಾಗೂ ವಾಕಿಂಗ್ ಮಾಡಲು ಬರುವುದರಿಂದ ಶೌಚಗೃಹದ ಅಗತ್ಯವಿತ್ತು. ಈ ದಿಸೆಯಲ್ಲಿ ಅನುದಾನ ಕ್ರೋಡೀಕರಿಸಿ ಹೈಟೆಕ್ ಶೌಚಗೃಹ ನಿರ್ಮಿಸಲಾಗಿದೆ ಎಂದರು.
ಟಿಎಪಿಸಿಎಂಎಸ್ ನ ನಿರ್ದೇಶಕ ಎಂ.ಆರ್. ಅನಿಲ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ಮಾಜಿ ಅಧ್ಯಕ್ಷ ಕೋಟೆ ಮೋಹನ್, ಪರಿಸರ ಇಂಜಿನಿಯರ್ ಬಿ.ಎ.ಕಾವ್ಯಶ್ರೀ, ಕಿರಿಯ ಇಂಜಿನಿಯರ್‌ಗಳಾದ ಬಸವರಾಜು, ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಕ ಮೂರ್ತಿ ಸೇರಿದಂತೆ ಪೌರಕಾರ್ಮಿಕರು ಇದ್ದರು.