ಆರೋಗ್ಯ ಕಾಳಜಿ ಭಾಗ್ಯಗಳಿಗಿಂತ ಉತ್ತಮ

 ಸಕಲೇಶಪುರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರವನ್ನು ಶ್ರೀ ಚನ್ನಸಿದ್ದೇಶ್ವರ ಸ್ವಾಮಿಜಿ ಉದ್ಘಾಟಿಸಿದರು.
ಸಕಲೇಶಪುರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರವನ್ನು ಶ್ರೀ ಚನ್ನಸಿದ್ದೇಶ್ವರ ಸ್ವಾಮಿಜಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತೆಂಕಲಗೊಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಅಭಿಮತ
ಸಕಲೇಶಪುರ: ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಅತ್ಯುತ್ತಮವಾಗಿದ್ದು, ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದು ತೆಂಕಲಗೊಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಮಲೆನಾಡು ರಕ್ಷಣಾ ಸೇನೆ ವತಿಯಿಂದ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಸಾಲುಮರದ ತಿಮ್ಮಕ್ಕ ಸ್ಮರಣಾರ್ಥ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಂದು ಹಣ ಸಂಪಾದಿಸುವ ಭರದಲ್ಲಿ ಒತ್ತಡದೊಂದಿಗೆ ಜನರು ಕೆಲಸ ಮಾಡುತ್ತಿದ್ದಾರೆ. ಆದರೆ ಈ ಒತ್ತಡವೇ ಅನಾರೋಗ್ಯಕ್ಕೆ ಕಾರಣವಾಗಿದೆ. ಹಾಗಾಗಿ ಒತ್ತಡ ರಹಿತ ಜೀವನ ರೂಪಿಸಿಕೊಳ್ಳುವ ಅಗತ್ಯವಿದೆ ಎಂದರು.
ದೇವರು ನಮಗೆ ಏನನ್ನೂ ಕೊಟ್ಟಿಲ್ಲ ಎಂದು ಕೊರಗಬಾರದು. ಉತ್ತಮ ಆರೋಗ್ಯ ಕೋಟಿ ರೂ.ಗೆ ಸಮವಾಗಿದ್ದು, ಎಷ್ಟೇ ಸಂಪತ್ತಿದ್ದರೂ ಉತ್ತಮ ಆರೋಗ್ಯಕ್ಕೆ ಸಮವಲ್ಲ. ಆದ್ದರಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಳ್ಳುವು ದರೊಂದಿಗೆ ಪರಿಸರ ರಕ್ಷಿಸಬೇಕು ಎಂದರು.
ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸಮಾಜ ಸದೃಢವಾಗಿರಬೇಕಾದರೆ ಅಲ್ಲಿನ ಜನರು ಆರೋಗ್ಯವಂತರಾಗಿರ ಬೇಕು. ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮಾಜಿ ಶಾಸಕ ಗುರುದೇವ್ ಮಾತನಾಡಿ, ಉತ್ತಮ ಪರಿಸರ ಇಂದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಉತ್ತಮ ಗಾಳಿ, ನೀರು ದೊರೆಯುವಂತಹ ಪರಿಸರವನ್ನು ನಾವು ರೂಪಿಸಿಕೊಳ್ಳಬೇಕಿದೆ. ಅಭಿವೃದ್ಧಿ ಹೆಸರಿನಲ್ಲಿ ದೇವರು ಸೃಷ್ಟಿಸಿದ್ದ ಪರಿಸರವನ್ನು ನಾವು ಹಾಳು ಮಾಡುತ್ತಿದ್ದು, ಇದು ಕೊನೆಯಾಗಬೇಕಿದೆ ಎಂದರು.
ನೂರಾರು ಜನರು ಉಚಿತ ಆರೋಗ್ಯ ತಪಾಸಣೆಯಲ್ಲಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಮಲೆನಾಡು ರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ಜಿಲ್ಲಾಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ಮಂಜುದೇವ್, ಸಮಾಜ ಸೇವಕ ಬ್ಯಾಕರವಳ್ಳಿ ಜಯಣ್ಣ, ಪ್ರತಿಭಾ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net