ಪತಾಂಜಲಿ ಯೋಗ ಪರಿವಾರದಿಂದ ಆರೋಗ್ಯ ಜಾಗೃತಿ

ಹಾಸನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಚ್.ಪಿ. ಸ್ವರೂಪ್ ಪ್ರಕಾಶ್, ಹರಿಹರಪುರ ಶ್ರೀಧರ್, ಶಾರದಾ ಧಮಾನಂದ್, ನಾಗೇಶ್, ಕೆ.ಎನ್.ದೊರೆಸ್ವಾಮಿ, ಡಾ.ಎಂ.ಆರ್.ಚಂದ್ರಶೇಖರ್, ಡಾ.ಜಿ.ಡಿ.ನಾರಾಯಣ್ ಇತರರಿದ್ದರು.
ಹಾಸನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಚ್.ಪಿ. ಸ್ವರೂಪ್ ಪ್ರಕಾಶ್, ಹರಿಹರಪುರ ಶ್ರೀಧರ್, ಶಾರದಾ ಧಮಾನಂದ್, ನಾಗೇಶ್, ಕೆ.ಎನ್.ದೊರೆಸ್ವಾಮಿ, ಡಾ.ಎಂ.ಆರ್.ಚಂದ್ರಶೇಖರ್, ಡಾ.ಜಿ.ಡಿ.ನಾರಾಯಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪತಾಂಜಲಿ ಯೋಗ ಪರಿವಾರದಿಂದ ಆರೋಗ್ಯ ಜಾಗೃತಿ
  • ಶಾಸಕ ಸ್ವರೂಪ್ ಪ್ರಕಾಶ್ ಶ್ಲಾಘನೆ
  • ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವ
ಹಾಸನ: ನಗರದ ರಿಂಗ್ ರಸ್ತೆ ಸಮೀಪದಲ್ಲಿರುವ ಸತ್ಯಮಂಗಲ ಕೆರೆ ಪಾರ್ಕ್‌ನಲ್ಲಿ ಸುಗ್ಗಿ ಯೋಗ ಕೇಂದ್ರ, ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಪತಂಜಲಿ ಯೋಗ ಪರಿವಾರ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಆರೋಗ್ಯಕರ ಜೀವನಶೈಲಿ, ಯೋಗಾಭ್ಯಾಸದ ಮಹತ್ವ, ಕೆರೆಗಳ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಕುರಿತಾಗಿ ವಿಶಿಷ್ಟ ಸಂದೇಶಗಳನ್ನು ನೀಡಲಾಯಿತು.
ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಮಾನವ ಜನ್ಮ ಮುಖ್ಯವಲ್ಲ ಮಾನವೀಯತೆ ಮುಖ್ಯ ಎಂಬ ವಚನವನ್ನು ಉಲ್ಲೇಖಿಸಿ, ಸಮಾಜದಲ್ಲಿ ಮಾನವೀಯತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದರು.
ಪತಂಜಲಿ ಯೋಗ ಪರಿವಾರವು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು. ನಗರದ ಕೆರೆಗಳು ಉಳಿದರೆ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಕೆರೆಗಳು ಕೇವಲ ನೀರಿನ ಸಂಗ್ರಹಣಾ ಕೇಂದ್ರಗಳಲ್ಲ, ಅವು ಜೀವ ವೈವಿಧ್ಯದ ಮೂಲವಾಗಿವೆ. ಅವುಗಳನ್ನು ಉಳಿಸಿ ಅಭಿವೃದ್ಧಿಪಡಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಎಸ್.ಎಂ. ಕೃಷ್ಣ ಲೇಔಟ್‌ನಲ್ಲಿ ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇದೇ ಮಾದರಿಯಲ್ಲಿ ಸತ್ಯಮಂಗಲ ಕೆರೆ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಸತ್ಯಮಂಗಲ ಕೆರೆ ಅಭಿವೃದ್ಧಿಯಾದರೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಜನರಿಗೆ ಬೆಳಗ್ಗೆ-ಸಂಜೆ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ವಾತಾವರಣ ದೊರೆಯಲಿದೆ. ಕೆರೆ ಕಟ್ಟೆಗಳನ್ನು ಉಳಿಸಿ, ಪಾರ್ಕ್‌ಗಳನ್ನು ಸುಂದರಗೊಳಿಸುವ ಕೆಲಸಕ್ಕೆ ಶಾಸಕನಾಗಿ ನನಗೆ ವಿಶೇಷ ಆಸಕ್ತಿ ಇದೆ. ಸರ್ಕಾರದಿಂದ ಅನುದಾನ ಕಡಿಮೆ ಬಂದರೂ ಸಹ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್.ಸತ್ಯವತಿ ಮಹಿಳಾ ಸಂಬಂಧಿತ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿಮಾತನಾಡಿ, ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಇಂದಿನ ವೇಗದ ಜೀವನದಲ್ಲಿ ಜನರು ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಆದರೆ, ಉತ್ತಮ ನಿದ್ರೆ, ಸಮತೋಲನ ಆಹಾರ, ಯೋಗಾಭ್ಯಾಸ ಮತ್ತು ಮಾನಸಿಕ ಶಾಂತಿ ಇವುಗಳೇ ನಿಜವಾದ ಶ್ರೀಮಂತಿಕೆ ಎಂದು ಹೇಳಿದರು.
ಯಾರು ಏಳು ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ಯಾರು ಔಷಧಿ ಮಾತ್ರೆಗಳ ಅವಲಂಬನೆಯಿಲ್ಲದೆ ಬದುಕುತ್ತಾರೆ, ಯಾರು ಯಾವುದೇ ಒತ್ತಡವಿಲ್ಲದೆ ಸಂತೋಷದಿಂದ ಜೀವನ ನಡೆಸುತ್ತಾರೆ ಹಾಗೂ ಹೊಟ್ಟೆ ತುಂಬ ಊಟ ಮಾಡಿ ಅದನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅವರೇ ನಿಜವಾದ ಶ್ರೀಮಂತರಾಗುತ್ತಾರೆ ಎಂದು ಹೇಳಿದರು.
ಹಣಕ್ಕಿಂತ ಆರೋಗ್ಯವೇ ಅಮೂಲ್ಯ. ರೋಗ ಬಂದಾಗ ಮೊದಲು ಆರೋಗ್ಯ ಮರಳಿ ಸಿಗಲಿ ಎಂಬುದೇ ಎಲ್ಲರ ಪ್ರಾರ್ಥನೆ ಆಗುತ್ತದೆ ಎಂದರು. ನಿವೃತ್ತಿ ನಂತರ ಮೊಬೈಲ್‌ಗಳಲ್ಲಿ ಕಾಲ ಕಳೆಯುವುದಕ್ಕಿಂತ ಯೋಗಾಭ್ಯಾಸ ಮತ್ತು ಕುಟುಂಬದ ಜತೆ ಸಮಯ ಕಳೆಯುವುದು ಉತ್ತಮ. ಪ್ರತಿದಿನ ಸ್ವಲ್ಪ ಸಮಯ ಯೋಗಕ್ಕೆ ಮೀಸಲಿಟ್ಟರೆ ಆಸ್ಪತ್ರೆ ಮತ್ತು ಔಷಧಿಗಳ ಅವಶ್ಯಕತೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ವಿಶೇಷವಾಗಿ ಮಹಿಳೆಯರು ಕುಟುಂಬದ ಆರೋಗ್ಯದ ಕೇಂದ್ರೀಯ ಶಕ್ತಿ. ಅವರು ಆರೋಗ್ಯವಾಗಿದ್ದರೆ ಮನೆ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಬೆಳಗ್ಗೆ ಅಗ್ನಿಹೋತ್ರದೊಂದಿಗೆ ಪ್ರಾರಂಭವಾಯಿತು. ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಯೋಗ ಪ್ರದರ್ಶನ, ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ಗುರುವಂದನೆ, ಸದಸ್ಯರಿಗೆ ಗೌರವ ಸಮರ್ಪಣೆ ಹಾಗೂ ವಿಶೇಷ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸ್ಥಳದಲ್ಲೇ 20 ಮಹಿಳೆಯರಿಗೆ ಲಕ್ಕಿ ಡಿಪ್ ಮೂಲಕ ಬಹುಮಾನ ವಿತರಣೆ ಮಾಡಲಾಯಿತು.
ವೇದಭಾರತೀ ಸಂಯೋಜಕ ಹರಿಹರಪುರ ಶ್ರೀಧರ್, ಪತಂಜಲಿ ಯೋಗ ಪರಿವಾರ ಜಿಲ್ಲಾ ಮಹಿಳಾ ಪ್ರಭಾರಿ ಶಾರದಾ ಧಮಾನಂದ್, ಜಿಲ್ಲಾ ಕಿಸಾನ್ ಪ್ರಭಾರಿ ನಾಗೇಶ್, ಜಿಲ್ಲಾ ಯುವ ಪ್ರಭಾರಿ ಕೆ.ಎನ್.ದೊರೆಸ್ವಾಮಿ, ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಂ.ಆರ್.ಚಂದ್ರಶೇಖರ್, ಡಾ.ಜಿ.ಡಿ.ನಾರಾಯಣ್, ಮಂಜರಾಜು, ಪಿ. ರವಿಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಸಮಾಜ ಕಲ್ಯಾಣ ಅಧಿಕಾರಿ ಮನು, ಡಾ.ಜಯದೇವೇಗೌಡ, ಪವಿತ್ರಾ, ಪ್ರದೀಪ್ ಇತರರಿದ್ದರು. .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net