ಆಲೂರು: ಕಸಬಾ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಜ.29 ರಂದು ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದ್ದು, ತಾಲೂಕಿನ ಸಮಾಜ ಬಾಂಧವರು ತಪ್ಪದೆ ಭಾಗವಹಿಸಿ ಸಹಕರಿಸಬೇಕು ಎಂದು ಕಾರ್ಜುವಳ್ಳಿ ಹಿರೇಮಠ ಸಂಸ್ಥಾನ ಮಠಾಧೀಶ ಹಾಗೂ ಗೌರವಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಕಸಬಾ ಹಿಂದೂ ಸಮಾಜೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಪಿ.ರವಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತನ್ನ ಕಾರ್ಯ ಯೋಜನೆಯಲ್ಲಿ ಹಿಂದೂ ಸಮಾಜೋತ್ಸವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಂಡ ಹಿಂದೂ ಸಮಾಜ ದೇಶದಲ್ಲಿ ಹರಿದು ಹಂಚಿ ಹೋಗಿರುವುದನ್ನು ಒಗ್ಗೂಡಿಸುವ ಸಲುವಾಗಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಹಿಂದೂ ಸಮಾಜದವರು ಜಾತಿ-ಭೇದ ಮರೆತು ಸಂಘಟಿತರಾಗಿ ನಾವೆಲ್ಲ ಒಂದು ನಾವೆಲ್ಲ ಮುಂದು ಎನ್ನುವ ಮೂಲಕ ಯುವಕರಲ್ಲಿ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು ಎಂದರು.
ಸಂಕಲಾಪುರ ಮಠಾಧೀಶ ಶ್ರೀಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜ.29ರಂದು ಮದ್ಯಾಹ್ನ 3 ಗಂಟೆಗೆ ಪಾಳ್ಯ ಹೋಬಳಿ ಸಂಕಲಾಪುರ ಮಠದಲ್ಲಿ, ನಂತರ ಕಾರ್ಜುವಳ್ಳಿ ಮಠದಲ್ಲಿಯೂ ಸಹ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಬಿ.ಈ.ಸದಾಶಿವಪ್ಪ, ಜ.29ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸೆಸ್ಕ್ ವೃತ್ತದಿಂದ ಪೂರ್ಣಕುಂಭದೊಂದಿಗೆ ಪ್ರಾರಂಭವಾದ ಶೋಭಾಯಾತ್ರೆ ಕೊನೆಪೇಟೆ ಗಣಪತಿ ಪೆಂಡಾಲಿನಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.
ಹಾಸನ ಆದಿಚುಂಚನಗಿರಿ ಶಾಖಾ ಮಠಾಧೀಶ ಶ್ರೀಶಂಭುನಾಥ ಸ್ವಾಮೀಜಿ, ಸಂಕಲಾಪುರ ಮಠಾಧೀಶ ಶ್ರೀಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಲಿದ್ದಾರೆ. ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಕೆ.ಟಿ.ಉಲ್ಲಾಸ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಚಾರಕ್ ಪ್ರಮುಖ್ ವಿಜಯ್, ಕಾರ್ಯಾಧ್ಯಕ್ಷ ಕೆ.ಪಿ.ರವಿ, ಕೋಶಾಧ್ಯಕ್ಷ ರವಿಕುಮಾರ್, ಲೋಹಿತ್, ಹರ್ಷಿತಾ, ಕೃಷ್ಣೇಗೌಡ, ಮಡಬಲು ಕಾಂತರಾಜು ಮತ್ತು ನಿರ್ದೇಶಕರು ಭಾಗವಹಿಸಿದ್ದರು.