ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಆಡಳಿತ ಅವಧಿ ಸರಿಗಟ್ಟಿ ಇತಿಹಾಸ ನಿರ್ಮಿಸಿದ್ದಾಗಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದ ಕಾಂಗ್ರೆಸ್ ಮುಖಂಡರು
ಬೇಲೂರು: ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೀರ್ಘಾಯುಷ್ಯ ಹಾಗೂ ಮುಂದುವರೆದ ಆಡಳಿತಕ್ಕಾಗಿ ಪಟ್ಟಣದ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಂ.ಸಂತೋಷ್ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಿ ಶುಭ ಕೋರಿದರು.
ಬಿ.ಎಂ.ಸಂತೋಷ್ ಮಾತನಾಡಿ, ಸೋಲಿಲ್ಲದ ಸರದಾರ, ಅಹಿಂದ ವರ್ಗಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಾವಧಿ ಅಧಿಕಾರ ನಡೆಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಆಡಳಿತ ಅವಧಿಯನ್ನು ಸರಿಗಟ್ಟಿ ಇತಿಹಾಸ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲೂ ರಾಜ್ಯದ ಹಿತಕ್ಕಾಗಿ ಇನ್ನಷ್ಟು ಕಾಲ ಅಧಿಕಾರ ನಡೆಸುವ ಶಕ್ತಿ ಹಾಗೂ ಮುಖಂಡರ ಬೆಂಬಲ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಬಿ.ಎಂ.ರಂಗನಾಥ್ ಮಾತನಾಡಿ, ರಾಜ್ಯ ಕಂಡ ಧೀಮಂತ ನಾಯಕ, ಅಹಿಂದ ವರ್ಗಗಳ ಆಶಾಕಿರಣ ಹಾಗೂ ರಾಜ್ಯದ ಹಿತ ಕಾಯುವ ಶಕ್ತಿಶಾಲಿ ನಾಯಕರೆಂದರೆ ಸಿದ್ದರಾಮಯ್ಯ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವಲ್ಲಿ ಯಶಸ್ವಿಯಾದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರನ್ನು ಅಧಿಕಾರದಿಂದ ಇಳಿಸಲು ವಿರೋಧ ಪಕ್ಷಗಳು ಸಂಚು ರೂಪಿಸುತ್ತಿದ್ದರೂ, ಧೈರ್ಯದಿಂದ ಎದುರಿಸಿ ಜನರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಹಾಲು ಮತದ ತಾಲೂಕು ಅಧ್ಯಕ್ಷ ಉಮಾಶಂಕರ್, ಮುಖಂಡರಾದ ಮಂಜುನಾಥ್, ನರಸಿಂಹ, ಬಸವರಾಜ್, ರಾಜಣ್ಣ, ರಾಕೇಶ್, ಪ್ರಸನ್ನ, ಸುರೇಶ್, ನಾಗರಾಜ್ ಹಾಗೂ ಕಾಂಗ್ರೆಸ್ ಮುಖಂಡರಿದ್ದರು.