ಬೇಲೂರು: ಹಿಂದೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಉತ್ತಮ ವಿದ್ಯಾಭ್ಯಾಸದೊಂದಿಗೆ ಉನ್ನತ ಹುದ್ದೆಗಳನ್ನು ಪಡೆದ ನಿದರ್ಶನವಿದೆ. ಆದರೆ ಇಂದು ಸರ್ಕಾರ ಎಲ್ಲ ಸೌಲಭ್ಯಗಳನ್ನು ಕೊಟ್ಟರೂ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣೇಗೌಡ ಹೇಳಿದರು.
ವಿವೇಕಾನಂದ ಜಯಂತಿ ಹಾಗೂ ಶಾಲಾ-ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದ ವಿವೇಕಾನಂದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಒಕ್ಕಲಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಷ್ಟ ಅನುಭವಿಸಿದವನೇ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡುತ್ತಾನೆ ಎಂಬುದು ಸತ್ಯ. ನಮಗೂ ಒಂದು ಹೊತ್ತಿನ ಊಟಕ್ಕೂ ಕೊರತೆ ಇದ್ದರೂ ವಿದ್ಯಾಭ್ಯಾಸ ಮಾಡಿದ್ದೇವೆ. ಆದರೆ ಇಂದು ಮಕ್ಕಳಿಗೆ ಊಟ ಮಾಡುವುದನ್ನೇ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಕಡಿಮೆಯಾಗುತ್ತಿದೆ. ಎಲ್ಲರೂ ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಆದ್ದರಿಂದ ಶಿಕ್ಷಕರೇ ಇಂದು ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮೌಲ್ಯಗಳನ್ನು ಶಾಲೆಗಳಲ್ಲೆ ಕಲಿಸುವ ಅಗತ್ಯವಿದೆ. ದೇಶದಲ್ಲಿ ಕೋಟ್ಯಂತರ ಜನರು ಅನ್ನಕ್ಕಾಗಿ ಪರಿತಪಿಸುವಾಗ ವಿವಾಹ ಹಾಗೂ ಇತರ ಸಮಾರಂಭಗಳಲ್ಲಿ ಅಪಾರ ಪ್ರಮಾಣದ ಆಹಾರ ವ್ಯರ್ಥ ಮಾಡುವುದು ಎಷ್ಟು ಸರಿ? ಎಂದು ಬೇಸರವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಯುವಕರು ಹೆಚ್ಚಾಗಿದ್ದು, ಪ್ರೀತಿ ಪ್ರೇಮ ಸಂಬಂಧಿತ ಅಪರಾಧಗಳು ಮಿತಿಮೀರಿವೆ. ವಿದ್ಯಾರ್ಥಿಗಳಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ದುಖಃಕರ ಸಂಗತಿ ಎಂದರು.
ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷೆ ಎಂ.ಎಸ್.ಪದ್ಮಿನಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಬೇಕು. ತಂದೆ ತಾಯಿ ಶಿಕ್ಷಣಕ್ಕಾಗಿ ಕಾಲೇಜಿಗೆ ಸೇರಿಸಿರುವ ಉದ್ದೇಶ ಮನಗಂಡು ಸಾಧನೆ ಮಾಡುವ ಛಲ ಬೆಳೆಸಿಕೊಳ್ಳಬೇಕು ಎಂದರು.
ವಿವೇಕಾನಂದ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಆರ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಗುಣ ಮಟ್ಟದ ಶಿಕ್ಷಣ ನೀಡಲು ಸಂಸ್ಥೆಯಲ್ಲಿ ಯಾವುದೇ ಕೊರತೆಯಿಲ್ಲ. ವಿದ್ಯಾರ್ಥಿಗಳು ಎರಡು ದಿನ ಕಾಲೇಜಿಗೆ ಹಾಜರಾಗದಿದ್ದರೂ ಪಾಲಕರಿಗೆ ಮಾಹಿತಿ ನೀಡಲಾಗುತ್ತದೆ. ಶಿಕ್ಷಕರು ಹಾಗೂ ಉಪನ್ಯಾಸಕರು ಶ್ರಮಪಟ್ಟು ಬೋಧನೆ ಮಾಡುತ್ತಿದ್ದು, ಅದರ ಪ್ರತಿಫಲವಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೋರಿಸಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಶಿವಕುಮಾರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಗಂಗೇಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್‌ಕುಮಾರ್, ಶಿಕ್ಷಕರಾದ ಸಿ.ಪಿ. ವಿಜಯಕುಮಾರ್, ಗುರುಮೂರ್ತಿ, ನವೀನ್, ದೀಕ್ಷಾ, ಬೃಂದ, ರವಿಕಾಂತ್ ಇದ್ದರು.