ಪಟ್ಟಣದ ಶಾರದ ಅನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಶಾರದಾ ಸುಗ್ಗಿ ಸಂತೆ ಕಾರ್ಯಕ್ರಮಕ್ಕೆ ಹಿರೀಸಾವೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕಿ ರೂಪಾ ಬಿರದಾರ್ ಚಾಲನೆ ನೀಡಿದರು. ಪರಮೇಶ್, ಪ್ರಮೋದ್, ಮಂಜುನಾಥ್ ಮೌರ್ಯ ಉದಯ್ ಕುಮಾರ್, ಇತರರು ಇದ್ದರು.
ಹಿರೀಸಾವೆ: ಶೈಕ್ಷಣಿಕವಾಗಿ ಮೌಲ್ಯಯುತ ಶಿಕ್ಷಣದ ಜತೆಗೆ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಹಿರಿಸಾವೆ ಠಾಣೆ ಆರಕ್ಷಕ ನಿರೀಕ್ಷಕಿ ರೂಪಾ ಬಿರಾದಾರ್ ಹೇಳಿದರು.
ಪಟ್ಟಣದ ನುಗ್ಗೆಹಳ್ಳಿ ರಸ್ತೆಯಲ್ಲಿರುವ ಶಾರದಾ ಅನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾರದಾ ಸುಗ್ಗಿ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲ ಪಾಲಕರ ಅಜಾರುಕತೆಯಿಂದ ಸೈಬರ್ ಕಳವು ಪೋಕ್ಸೋ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ತಮ್ಮ ಮಕ್ಕಳ ಭವಿಷ್ಯದಲ್ಲಿ ಬದುಕನ್ನು ಸುಂದರ ಹಾಗೂ ಸುಭದ್ರವಾಗಿ ಕಟ್ಟಿಕೊಳ್ಳುವ ಸಲುವಾಗಿ ಪಾಲಕರ ಪಾತ್ರ ಬಹುಮುಖ್ಯವಾದುದು. ಮಕ್ಕಳ ಚಟುವಟಿಕೆ, ಚಲನವನ, ದೈಹಿಕ ಹಾಗೂ ಮಾನಸಿಕ ಬದಲಾವಣೆ ಬಗ್ಗೆ ಗಮನ ನೀಡಿ ಅದಕ್ಕೆ ಕಾರಣ ತಿಳಿದು ಪರಿಹಾರ ಕಂಡುಕೊಳ್ಳುವುದು ಪಾಲಕರ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಚ್.ಎ.ಪ್ರಮೋದ್ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಾಗಲು ಸುಗ್ಗಿಸಂತೆ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಲಿವೆ. ಗಣಿತ ಕ್ರಿಯೆಗಳಾದ ಸಂಕಲನ, ವ್ಯವಕಲನ ಭಾಗಕಾರ ಕಲ್ಪನೆಗಳು ಪರಿಚಯವಾಗಿ ಜನರ ಸಂಪರ್ಕ ಹೆಚ್ಚಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಶಾಮಲಾ ಮಾತನಾಡಿದರು. ಸುಗ್ಗಿಯ ಸಂತೆಯಲ್ಲಿ ಹಣ್ಣು ತರಕಾರಿ, ಸೊಪ್ಪು, ಜ್ಯೂಸ್, ಬಿರಿಯಾನಿ, ಐಸ್ ಕ್ರೀಮ್, ಪಾನಿಪುರಿ, ಕಾಫಿ-ಟೀ ಮತ್ತು ಬಾದಾಮಿ ಹಾಲು ಅಲ್ಲದೆ ಜಾನುವಾರುಗಳನ್ನು ಶಾಲೆಯ ಆವರಣದಲ್ಲಿ ಕಟ್ಟಿ ವ್ಯಾಪಾರ ಮಾಡುವ ಮೂಲಕ ಜನರನ್ನು ವಿದ್ಯಾರ್ಥಿಗಳು ಆಕರ್ಷಿಸಿದರು.
ಸಂಸ್ಥೆಯ ಗ್ರಾಮ ಪಂಚಾಯತ್ ಅಧ್ಯಕ್ಷ ಪರಮೇಶ್, ಮಂಜುನಾಥ್ ಮೌರ್ಯ, ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಆಕರ್ಷ ಇತರರು ಇದ್ದರು.