ಬೇಲೂರು : ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಎರಡು ಅಥವಾ ಮೂರನೇ ಸ್ಥಾನದಲ್ಲಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದೇವೆ ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ತಾಲೂಕು ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟು ಕಡಿಮೆ. ಇದರಿಂದ ರಾಜಕೀಯವಾಗಿ ಹಿಂದುಳಿದಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜ ಬಲಾಢ್ಯವಾಗಿ ಮುಂದೆ ಬರಲು ಸಾಧ್ಯ. ನೌಕರರ ಕ್ಷೇಮಾಭಿವೃದ್ಧ್ದಿಗೆ ನನ್ನ ಮಗನ ಹೆಸರಿನಲ್ಲಿ 1 ಲಕ್ಷ ರೂ. ನೀಡಲಾಗುವುದು ಎಂದು ಘೋಷಿಸಿದರು.
ಕಾಂಗ್ರೆಸ್ ಮುಖಂಡ ರಾಜಶೇಖರ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ವೀರಶೈವ ಲಿಂಗಾಯತ ಸಮಾಜದ ವ್ಯಕ್ತಿ ಚುನಾವಣೆಗೆ ನಿಂತರೆ ಅವರನ್ನು ಗೆಲ್ಲಿಸುವುದೆ ಗುರಿಯಾಗಿರಬೇಕು. ತಾಲೂಕಿನಲ್ಲಿ 500ಕ್ಕೂ ಹೆಚ್ಚು ನೌಕರರಿದ್ದರೂ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟು ಜನರು ಬಂದಿದ್ದಾರೆ. ಕಷ್ಟವಿದ್ದಾಗ ಮಾತ್ರ ನಾಯಕರನ್ನು ಹುಡುಕಿಕೊಂಡು ಹೋಗುವ ಹವ್ಯಾಸ ಬಿಟ್ಟು ಸಮಾಜದ ಏಳಿಗೆಗೆ ಕೆಲಸ ಮಾಡಬೇಕು. ಆಗ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷೆತೆ ವಹಿಸಿ ಮಾತನಾಡಿದ ವೀರಶೈವ ಲಿಂಗಾಯತ ಸಮಾಜದ ನೌಕರರ ಸಂಘದ ಮುಖಂಡ ಎಸ್.ಬಿ.ಪಾಲಾಕ್ಷ, ನಮ್ಮ ನೌಕರರ ಸಂಘದ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಕಾಣುವುದು ನಮ್ಮ ಉದ್ದೇಶವಾಗಿದೆ. ಕಾರಣ ಸರ್ಕಾರಿ ನೌಕರರಿಗೆ ಕಷ್ಟವಾದಾಗ ಸಮಾಜದ ಮುಖಂಡರು, ವ್ಯಕ್ತಿಗಳನ್ನು ಪರಿಚಯ ಮಾಡಿಕೊಡಲೆಂದು. ಸರ್ಕಾರಿ ನೌಕರರು ಮನಸ್ಸು ಮಾಡಿದರೆ ಯಾವ ತಂತ್ರ ಮಂತ್ರವನ್ನಾದರೂ ಉಪಯೋಗಿಸಬಹುದು, ಸರ್ಕಾರದಲ್ಲಿ ಮುಖ್ಯಮಂತ್ರಿ ಆದೇಶ ಮಾಡಿದರೆ ಅದನ್ನು ಕಾರ್ಯರೂಪಕ್ಕೆ ನೌಕರರೇ ತರಬೇಕು. ಸರ್ಕಾರ ಮತ್ತು ನೌಕರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸರ್ಕಾರದಲ್ಲಿ ಹೆಚ್ಚು ಅಧಿಕಾರಿ ಮತ್ತು ನೌಕರರಿಗೆ ಮಹತ್ವವಿರುವುದರಿಂದ ಒಗ್ಗಟ್ಟಾಗಿರಬೇಕು ಎಂದರು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೇಂದ್ರ ತೆಂಗು ಬೆಳೆಗಾರರ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ರಾಜ್ಯ ಕೈಗಾರಿಕಾ ನಿಗಮ ಮಂಡಳಿ ನಿರ್ದೇಶಕ ಗೆಂಡೇಹಳ್ಳಿ ಚೇತನ್, ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ತಾಲೂಕು ಅಧ್ಯಕ್ಷ ಅಡಗೂರು ಬಸವರಾಜ್, ಮುಖಂಡರಾದ ಚೇತನ್, ವಿಂಪು ಇತರರಿದ್ದರು.