ಬದುಕಿಗೆ ಪೂರಕ ಯೋಜನೆ ರೂಪಿಸಲಿ

ಅರಸೀಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸಂತೋಷ್ ಕುಮಾರ್, ಶಿವಕುಮಾರ್, ಧರ್ಮಶೇಖರ್, ದಯಾನಂದ, ಶಿವಲಿಂಗಪ್ಪ ಸೀಮಾ ಇತರರಿದ್ದಾರೆ. ಮತ್ತೊಂದು ಚಿತ್ರದಲ್ಲಿ ಕೆ.ಎಂ.ಶಿವಲಿಂಗೇಗೌಡ ಎತ್ತಿನ ಬಂಡಿ ಓಡಿಸಿ ಗಮನ ಸೆಳೆದರು.
ಅರಸೀಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸಂತೋಷ್ ಕುಮಾರ್, ಶಿವಕುಮಾರ್, ಧರ್ಮಶೇಖರ್, ದಯಾನಂದ, ಶಿವಲಿಂಗಪ್ಪ ಸೀಮಾ ಇತರರಿದ್ದಾರೆ. ಮತ್ತೊಂದು ಚಿತ್ರದಲ್ಲಿ ಕೆ.ಎಂ.ಶಿವಲಿಂಗೇಗೌಡ ಎತ್ತಿನ ಬಂಡಿ ಓಡಿಸಿ ಗಮನ ಸೆಳೆದರು.
Published on
ಅರಸೀಕೆರೆ: ಅನ್ನದಾತರು ನೆಮ್ಮದಿ ಬದುಕು ನಡೆಸಲು ಪೂರಕವಾದ ಯೋಜನೆಗಳನ್ನು ರೂಪಿಸಿದರೆ ಮಾತ್ರವೇ ಕೃಷಿ ಕ್ಷೇತ್ರ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕೃಷಿ ಇಲಾಖೆ ವತಿಯಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂಪ್ರದಾಯಿಕ ಬೆಳೆ ಜತೆಗೆ ವಾಣಿಜ್ಯ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿಸಿಕೊಂಡಿದ್ದು, ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಸಂದರ್ಭದಲ್ಲಿ ಬೆಂಬಲ ಬೆಲೆ ನೀಡಿ ಉತ್ಪನ್ನಗಳ ಖರೀದಿ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವ ಬೆಳವಣಿಗೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಳಚಲು ನಿರಂತರ ಹೋರಾಟ ಮಾಡುತ್ತಿದ್ದೇನೆ. ಇದಕ್ಕೆ ಪೂರಕವಾಗಿ ಕಣಕಟ್ಟೆ ಹೋಬಳಿ ಕೆರೆಗಳಿಗೆ ನೀರು ಹರಿಹರಿಸಿದ ಪರಿಣಾಮ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಮುಂಗಾರು ಹಂಗಾಮಿನ ವೇಳೆಗೆ ಎತ್ತಿನಹೊಳೆ ಯೋಜನೆ ಮೂಲಕ ಕಸಬಾ ಹೋಬಳಿ ಬಹುತೇಕ ಕೆರೆಗಳನ್ನು ತುಂಬಿಸುವ ಕೆಲಸ ಪೂರ್ಣಗೊಳ್ಳಲಿದೆ. ಗಂಡಸಿ ಹೋಬಳಿ ಜಲದಾಹ ಕೂಡ ತಣಿಯಲಿದೆ ಎಂದು ಹೇಳಿದರು.
ಮೆಚ್ಚುಗೆ: ಕೃಷಿ ಇಲಾಖೆ ಅಧಿಕಾರಿಗಳ ಸತತ ಪರಿಶ್ರಮದಿಂದ ವಿಶ್ವ ರೈತ ದಿನಾಚರಣೆ ಯಶಸ್ವಿಯಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮುಂದಿನ ವರ್ಷ ಹತ್ತು ಸಾವಿರ ಜನರನ್ನು ಸೇರಿಸಿ ಐತಿಹಾಸಿಕ ಸಮಾರಂಭ ನಡೆಸಲು ನಿರ್ಧರಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್ ವಿಶ್ವ ರೈತ ದಿನಾಚರಣೆ ಔಚಿತ್ಯ ಕುರಿತು ಮಾಹಿತಿ ನೀಡಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಸೇರಿದಂತೆ ರೈತ ಮುಖಂಡರು ಮಾತನಾಡಿದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಜಂಟಿ ನಿರ್ದೇಶಕ ರಮೇಶ್ ಕುಮಾರ್, ತೋಟಗಾರಿಕೆ ಎಡಿಎ ಸೀಮಾ, ತಾಪಂ ಇಒ ಗಂಗಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಕೆಲ್ಲಂಗೆರೆ ಕುಮಾರ್, ಕೃಷಿ ಸಮಾಜದ ಅಧ್ಯಕ್ಷ ಶಿವಕುಮಾರ್, ಕೃಷಿ ಅಧಿಕಾರಿಗಳಾದ ಪ್ರಭಾವತಿ, ಸುಬ್ರಹ್ಮಣ್ಯ, ತಾಲೂಕು ವರ್ತಕರ ಸಂಘದ ಅಧ್ಯಕ್ಷ ಕೆವಿಎನ್ ಶಿವು ಸೇರಿದಂತೆ ರೈತ ಸಂಘಟನೆ ಮುಖಂಡರು ವೇದಿಕೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net