ಗಂಡಸಿ ಹ್ಯಾಂಡ್‌ಪೋಸ್ಟ್ ವೃತ್ತ ಅಭಿವೃದ್ಧಿಗೆ ಕ್ರಮ

 ಗಂಡಸಿ ಹ್ಯಾಂಡ್‌ಪೋಸ್ಟ್ ವೃತ್ತದ ಬಳಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು. ಮೆಟ್ರೋ ಬಾಬು, ರಾಮಚಂದ್ರು, ಜಯರಾಮು, ಆಗ್ರೋ ಬಾಬು, ಮಲ್ಲೇಶ್, ಈಶ್ವರಪ್ಪ ಇತರರು.
ಗಂಡಸಿ ಹ್ಯಾಂಡ್‌ಪೋಸ್ಟ್ ವೃತ್ತದ ಬಳಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು. ಮೆಟ್ರೋ ಬಾಬು, ರಾಮಚಂದ್ರು, ಜಯರಾಮು, ಆಗ್ರೋ ಬಾಬು, ಮಲ್ಲೇಶ್, ಈಶ್ವರಪ್ಪ ಇತರರು.
Published on
ಗಂಡಸಿ: ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಗಂಡಸಿ ಹ್ಯಾಂಡ್‌ಪೋಸ್ಟ್ ವೃತ್ತದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ವಿಸ್ತರಣೆ ಮಾಡಲಾಗುವುದು. ಜನಪರ ಕೆಲಸಗಳಿಗೆ ಗಂಡಸಿ ಹೋಬಳಿಯ ಜನತೆ ಕೈಜೋಡಿಸಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.
ಹೋಬಳಿಯ ಗಂಡಸಿ ಹ್ಯಾಂಡ್‌ಪೋಸ್ಟ್ ಸರ್ಕಲ್‌ನ 4 ರಸ್ತೆಗಳನ್ನು ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೆ ರಾಜ್ಯ ಹೆದ್ದಾರಿ ಯೋಜನೆಯಡಿ 7.5 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣಾ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿ ಗಂಡಸಿ ಹ್ಯಾಂಡ್‌ಪೋಸ್ಟ್ ಸರ್ಕಲ್ ಗುರುತಿಸಿಕೊಂಡಿದೆ. ಪಟ್ಟಣಕ್ಕೆ ಬಸ್ ನಿಲ್ದಾಣದ ಅವಶ್ಯಕತೆ ಇದ್ದು ಅರಸೀಕೆರೆ ರಸ್ತೆಯ ಎಪಿಎಂಸಿ ಬಳಿ ಸುಸರ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಜಲ ಸಮಸ್ಯೆ ನಿವಾರಿಸಲು ಹೇಮಾವತಿ ನದಿ ನೀರನ್ನು 200 ಕೋಟಿ ರೂ. ವೆಚ್ಚದಲ್ಲಿ ಗಂಡಸಿ ಹೋಬಳಿಯ ಕೆರೆಗಳಿಗೆ ಅತಿ ಶೀಘ್ರದಲ್ಲೇ ನೀರು ತುಂಬಿಸಲಾಗುವುದು ಹಾಗೂ ಹೋಬಳಿಯಲ್ಲಿ ಎಲ್ಲ ರಸ್ತೆಗಳು ಸಮರ್ಪಕವಾಗಿದ್ದು ಉಳಿದ ಸಣ್ಣಪುಟ್ಟ ರಸ್ತೆಗಳನ್ನು ನಿರ್ಮಿಸಲು 200 ಕೋಟಿ ರೂ. ವೆಚ್ಚದಲ್ಲಿ ಮುಂದಿನ ವಾರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಗಂಡಸಿ ಸುತ್ತಮುತ್ತಲ ಜನತೆ ತಮ್ಮ ಮಕ್ಕಳ ಶುಭಕಾರ್ಯಗಳನ್ನು ನಡೆಸಲು ಗಂಡಸಿ ಹ್ಯಾಂಡ್‌ಪೋಸ್ಟ್ ಹಾಸನ ರಸ್ತೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿದೆ. ಜತೆಗೆ ಗಂಡಸಿ ಹೋಬಳಿಯ ಜನತೆಯ ಬಹುದಿನದ ಬೇಡಿಕೆ ಗಂಡಸಿ ಹ್ಯಾಂಡ್‌ಪೋಸ್ಟ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.
ನಿಯಮಬಾಹಿರವಾಗಿ ಸರ್ಕಲ್ ಬಳಿ ಗ್ರಾಮದ ಸೌಂದರ್ಯ ಹಾಳು ಮಾಡುವ ರೀತಿಯಲ್ಲಿ ಮುಖ್ಯ ರಸ್ತೆಯಲ್ಲಿ ಕೋಳಿ ಅಂಗಡಿ, ಮಟನ್ ಅಂಗಡಿಗಳು ತಲೆ ಎತ್ತಿದ್ದು, ಇವುಗಳನ್ನು ಅತಿ ಶೀಘ್ರವಾಗಿ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಯರಗನಾಳು ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಮಚಂದ್ರು, ಜಯರಾಮು, ತಾಪಂ ಮಾಜಿ ಅಧ್ಯಕ್ಷರಾದ ಆಗ್ರೋ ಬಾಬು, ಈಶ್ವರಪ್ಪ ಗುತ್ತಿಗೆದಾರ ವಾಸಣ್ಣ ಗಂಡಸಿ ಅಯ್ಯಣ್ಣ, ನಾಗರಾಜು, ಕಮಲಮ್ಮ, ನಾಗರಹಳ್ಳಿ ವೆಂಕಟೇಶ್, ಗಿರೀಶ್, ಧರ್ಮಣ್ಣ ಕಾಂಗ್ರೆಸ್ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net