ಬೇಲೂರು: ತಾಲೂಕಿನ ದೊಡ್ಡಬೇಡಗೆರೆ ಗ್ರಾಮದ ಸಮೀಪ ಯಗಚಿ ನೀರಾವರಿ ಯೋಜನೆಯಡಿ 249.9 ಲಕ್ಷ ರೂ. ಅಂದಾಜು ಮೊತ್ತದ 1135 ಮೀಟರ್ ಉದ್ದ ದೊಡ್ಡಬೇಡಗೆರೆ- ಮುತ್ತುಗನ್ನೆ-ಮಲ್ಲನಹಳ್ಳಿ-ಹೆಬ್ಬಾಳು ಸೇರುವ ಡಾಂಬರ್ ಕಾಮಗಾರಿಗೆ ಗುರುವಾರ ಸಂಜೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು.
ಮೂರು ವರ್ಷಗಳ ಹಿಂದೆ ಈ ರಸ್ತೆ ತುಂಬಾ ಹದಗೆಟ್ಟಿತ್ತು. ಕಾರಣ ಈ ರಸ್ತೆಯಲ್ಲಿ ಹೆಚ್ಚಾಗಿ ಟಿಪ್ಪರ್ ವಾಹನಗಳು ರಸ್ತೆ ಸಾಮರ್ಥ್ಯಕಿಂತ ಹೆಚ್ಚಿನ ತೂಕದ ಮರಳು, ಜಲ್ಲಿ ತುಂಬಿಕೊಂಡು ಹಗಲಿರುಳು ಓಡಾಡುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿ ಜನರು ಓಡಾಡಲು ಸಮಸ್ಯೆಯಾಗಿತ್ತು. ಚುನಾವಣೆ ಪೂರ್ವ ಮತದಾರರು ತಮ್ಮ ಬೇಡಿಕೆಗಳನ್ನು ತಿಳಿಸಿದ್ದರು. ಅದರಂತೆ ನನಗೆ ಚುನಾವಣೆಯಲ್ಲಿ ಹೆಬ್ಬಾಳು ಗ್ರಾಮ ಪಂಚಾಯತಿ ಸುತ್ತಮುತ್ತಲಿನ ಜನರು ನನಗೆ ಬೆಂಬಲ ನೀಡಿದ್ದರು. ಅಂದು ನೀಡಿದ ಆಶ್ವಾಸನೆ ಇಂದು ಈಡೇರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ತಾಲೂಕಿನ ಎಲ್ಲ ಗ್ರಾಮಗಳ ಅಭಿವೃದ್ಧಿಗೂ ಪ್ರಯತ್ನಿಸುತ್ತೇನೆ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಶಾಸಕರು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ ವಿರೋಧ ಪಕ್ಷದವರು ಶಾಸಕರು ಕೇವಲ ಭೂಮಿ ಪೂಜೆಗಷ್ಟೆ ಸೀಮಿತವಾಗುತ್ತಿದ್ದಾರೆ. ಯಾವುದೇ ಅನುದಾನ ತರುತ್ತಿಲ್ಲ. ಇದರಿಂದ ಬೇಲೂರು ಅಭಿವೃದ್ಧಿಯಾಗುತ್ತಿಲ್ಲ ಎಂದು ಟೀಕಿಸುತ್ತಿದ್ದರು. ಆದರೆ ಅವರಿಗೆ ಶಾಸಕರು ಇತ್ತೀಚಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತಿದ್ದಾರೆ ಎಂದರು.
ಹೆಬ್ಬಾಳು ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರಪ್ಪ, ದೇವೇಂದ್ರ, ಶಶಿಕಲಾ, ಗ್ರಾಮಸ್ಥರಾದ ದೊಡ್ಡ ವಿರೇಗೌಡ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.