ಶ್ರೀ ಕಣಿವೆ ಬಸವೇಶ್ವರನ ಜಾತ್ರಾ ಮಹೋತ್ಸವ

ಅರಕಲಗೂಡು ತಾಲೂಕಿನ ಶ್ರೀ ಕಣಿವೆ ಬಸವೇಶ್ವರ ದೇವರ 65ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಕಟ್ಟಿದ್ದ ಅಲಂಕೃತ ಜೋಡಿ ಎತ್ತುಗಳನ್ನು ವೀಕ್ಷಿಸಿದ ಶಾಸಕ ಎ. ಮಂಜು.
ಅರಕಲಗೂಡು ತಾಲೂಕಿನ ಶ್ರೀ ಕಣಿವೆ ಬಸವೇಶ್ವರ ದೇವರ 65ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಕಟ್ಟಿದ್ದ ಅಲಂಕೃತ ಜೋಡಿ ಎತ್ತುಗಳನ್ನು ವೀಕ್ಷಿಸಿದ ಶಾಸಕ ಎ. ಮಂಜು.
Published on
ಅರಕಲಗೂಡು: ತಾಲೂಕಿನಲ್ಲಿ ದನಕರುಗಳ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಣಿವೆ ಬಸವೇಶ್ವರ ದೇವರ 65ನೇ ವರ್ಷದ ಜಾತ್ರಾ ಮಹೋತ್ಸವ ಸೋಮವಾರ ಸಡಗರ ಸಂಭ್ರಮಗಳಿಂದ ಜರುಗಿತು.
ಜಾತ್ರೆಯಲ್ಲಿ ಜಾನುವಾರುಗಳು, ಅಲಂಕೃತ ರಾಸುಗಳ ಪ್ರದರ್ಶನ ಗಮನ ಸೆಳೆಯಿತು. ವಿವಿಧ ತಳಿಯ ರಾಸುಗಳು, ಹೋರಿಗಳು ಕಟ್ಟಿದ್ದು ವ್ಯಾಪಾರವೂ ಭರ್ಜರಿಯಾಗಿ ನಡೆಯಿತು. 1.5 ಲಕ್ಷ ರೂ. ಬೆಲೆಯ ಜೋಡಿ ಎತ್ತುಗಳನ್ನು ರೈತರು ಜಾತ್ರೆಯಲ್ಲಿ ಮಾರಾಟ ಮಾಡಿದರು. ಪ್ರತಿವರ್ಷ ಜಾತ್ರೆ ಇದೇ ರೀತಿ ವಿಜೃಂಭಣೆಯಿಂದ ನಡೆಯಬೇಕು ಎಂದು ರೈತ ನಾಗೇಶ್ ಹೇಳಿದರು.
ತಾಲೂಕಿನಲ್ಲಿ ಕಣಿವೆ ಬಸವೇಶ್ವರ ಜಾತ್ರೆಯಲ್ಲಿ ಉತ್ತಮ ತಳಿಯ ಹೋರಿಗಳು ಕಟ್ಟಿದ್ದು ವ್ಯಾಪಾರ ನಡೆಸಲು ಅನುಕೂಲವಾಗಿದೆ. ಇದರಿಂದ ರೈತರು ಹಳ್ಳಿಗಳಿಗೆ ಅಲೆದು ಜಾನುವಾರುಗಳನ್ನು ಕೊಳ್ಳುವ ಬದಲು ಜಾತ್ರೆಯಲ್ಲಿ ಒಂದೆ ಕಡೆ ಖರೀದಿಸಲು ಸಹಕಾರಿಯಾಗಿದೆ ಎಂದು ಅರೇಮಾದನಹಳ್ಳಿ ರೈತ ದರ್ಶನ ಸಂತಸ ವ್ಯಕ್ತಪಡಿಸಿದರು.
ಕಣಿವೆ ಬಸವೇಶ್ವರ ಸ್ವಾಮಿಯು ಜಾನುವಾರು ದೇವರು ಎಂದೇ ಖ್ಯಾತವಾಗಿದ್ದು, ಜಾನುವಾರುಗಳಿಗೆ ರೋಗ-ರುಜಿನ ಬಾರದಂತೆ, ಗಬ್ಬದ ಜಾನುವಾರುಗಳಿಗೆ ಸುಖ ಪ್ರಸವವಾಗುವಂತೆ ಕೋರಿ ರೈತರು ಹರಕೆ ಹೊರುವುದು ವಾಡಿಕೆಯಾಗಿದೆ. ಹಸು, ಎಮ್ಮೆ ಕರು ಹಾಕಿದರೆ ಮೊದಲ ಹಾಲಿನಲ್ಲಿ ಗಿಣ್ಣು ತಯಾರಿಸಿ ಕಣಿವೆ ಬಸಪ್ಪನಿಗೆ ರೋಟ್ಟಿ ಗಿಣ್ಣು ಸಮರ್ಪಿಸಿದ ಬಳಿಕ ಮನೆ ಮತ್ತು ಮಾರಾಟಕ್ಕೆ ಬಳಸುವುದು ಪದ್ಧತಿ.
ರೈತರ ಕೃಷಿ ಚಟುವಟಿಕೆ ಮುಗಿದ ಬಳಿಕ ಈ ಭಾಗದಲ್ಲಿ ನಡೆಯುವ ಮೊದಲ ಜಾನುವಾರು ಜಾತ್ರೆ ಇದಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವೇಶ್ವರನಿಗೆ ವಿಶೇಷ ಪೂಜೆ ನಡೆಸಿ ಜಾತ್ರೆ ನಡೆಸುವುದು ವಾಡಿಕೆ. ಅದರಂತೆ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯ ವಿಧಿವತ್ತಾಗಿ ಸಾಗಿದವು. ಕಳೆದೆರಡು ದಿನಗಳಿಂದ ಹಣ್ಣುಕಾಯಿ ಸಮರ್ಪಣೆ, ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸ್ಸಿಗೆ ಮುದ ನೀಡಿದವು.
ಮೂಲಸೌಕರ್ಯಗಳ ಭರವಸೆ: ಶಾಸಕ ಎ.ಮಂಜು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲಂಕೃತ ಜಾನುವಾರುಗಳನ್ನು ವೀಕ್ಷಿಸಿ ಮಾತನಾಡಿ, ಕಣಿವೆ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಜಾನುವಾರುಗಳ ಮಾರಾಟ ಪ್ರತಿವರ್ಷ ನಡೆಯುವಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುವುದು. ಕೆರೆ ಪುನಶ್ಚೇನಗೊಳಿಸಲಾಗುವುದು. ದೇವಸ್ಥಾನ ಸನ್ನಿಧಿಯಲ್ಲಿ ಬೃಹತ್ ಈಶ್ವರ ದೇವರ ಪ್ರತಿಮೆ ಸ್ಥಾಪನೆ ಆಗಬೇಕೆನ್ನುವುದು ಭಕ್ತರ ಒತ್ತಾಸೆಯಾಗಿದೆ. ಆದರೆ ಈ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದ್ದು, ಅನುಮತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಈಶ್ವರ ದೇವರ ಪ್ರತಿಮೆ ಸ್ಥಾಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net