ಅರಕಲಗೂಡು ತಾಲೂಕಿನ ಕೇರಳಾಪುರದ ಶ್ರೀ ವಿದ್ಯಾಗಣಪತಿ ಪ್ರೌಢಶಾಲೆಯ 1984-85ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ವೆಂಕಟರಾಮಯ್ಯ, ವೀರಭದ್ರಪ್ಪ, ಕೆ. ರಾಜಶೇಖರಯ್ಯ, ಪುಟ್ಟಲಿಂಗಯ್ಯ ಇತರರಿದ್ದರು.
ಅರಕಲಗೂಡು: ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವುದು ಅತ್ಯವಶ್ಯಕ ಎಂದು ನಿವೃತ್ತ ಶಿಕ್ಷಕ ಬಿ.ಪಿ. ವೀರಭದ್ರಪ್ಪ ನುಡಿದರು.
ತಾಲೂಕಿನ ಕೇರಳಾಪುರದ ಶ್ರೀ ವಿದ್ಯಾಗಣಪತಿ ಪ್ರೌಢಶಾಲೆಯ 1984-85ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಜಪ್ಪದಕಟ್ಟೆಯ ಜಪ್ಪೇಶ್ವರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಅಂತೆಯೇ ಶಿಕ್ಷೆ ಇಲ್ಲದ ಶಿಕ್ಷಣಕ್ಕೆ ಅರ್ಥವಿಲ್ಲ. ಹೀಗಾಗಿ ಕಲಿಕಾ ಹಂತದಲ್ಲಿ ಮಕ್ಕಳಿಗೆ ಶಿಸ್ತು ಸಂಯಮ ಮೂಡಿಸಿ ತಿದ್ದಿ ಬುದ್ಧಿ ಕಲಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಏನಾದರೂ ವ್ಯತ್ಯಾಸವಾದರೆ ಅದಕ್ಕೆ ಪಾಲಕರೆ ಹೊಣೆ ಹೊರತು ಶಿಕ್ಷಕರಲ್ಲ. ಇವರನ್ನು ಸರಿದಾರಿಗೆ ತರುವುದು ನಮ್ಮೆಲ್ಲತ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಈಗ ಮಾನವೀಯತೆ ಮಣ್ಣುಪಾಲಾಗಿದೆ. ಓದಿನ ಜತೆಗೆ ಮಾನವೀಯತೆ ಕಲಿಸುವುದು ಕೂಡ ಉತ್ತಮ ಶಿಕ್ಷಣವೇ ಆಗಿದೆ. ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತ ಸ್ಥಾನಮಾನವಿದೆ ಎಂಬುದನ್ನು ಮಗಂಡು ಎಲ್ಲರನ್ನು ಒಗ್ಗೂಡಿಸಿ ಗುರು ವಂದನೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಶ್ರಮ ಸಾರ್ಥಕವೆನಿಸಿದೆ ಎಂದರು.
ನಿವೃತ್ತ ಶಿಕ್ಷಕರಾದ ವೆಂಕಟರಾಮಯ್ಯ, ವೀರಭದ್ರಪ್ಪ, ಕೆ. ರಾಜಶೇಖರಯ್ಯ, ಪುಟ್ಟಲಿಂಗಯ್ಯ ಹಾಗೂ ದಿ. ನಿವೃತ್ತ ಶಿಕ್ಷಕರ ಪತ್ನಿಯರಿಗೆ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
ಜಪ್ಪೇಶ್ವರ ಸುಕ್ಷೇತ್ರದ ಪುರೋಹಿತ ಮುಕುಂದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಬಿ.ಎ. ಮಂಜೇಗೌಡ, ಎಚ್.ಜಿ. ಗೋವಿಂದ, ರವಿ, ಕೇಶವಮೂರ್ತಿ, ದಿನೇಶ್ ಮತ್ತು ಹಳೆಯ ವಿದ್ಯಾರ್ಥಿಗಳು ಇದ್ದರು.