ಅರಕಲಗೂಡು ತಾಲೂಕಿನ ಮದಲಾಪುರ ಗ್ರಾಮದ ಗುಂಡು ತೋಪಿನಲ್ಲಿ ಪರಿಸರ ಪ್ರೇಮಿ ಎಂ.ಆರ್. ರಂಗಸ್ವಾಮಿ ಅವರು ನೆಟ್ಟ ಸಸಿಗಳು ಮರಗಳಾಗಿ ಬೆಳೆದು ಹಸಿರು ವನ ನಿರ್ಮಿಸಿದೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪರಿಸರಕ್ಕೆ ಎಂ.ಆರ್.ರಂಗಸ್ವಾಮಿ ಮಹತ್ತರ ಕೊಡುಗೆ
ಮಾದಲಾಪುರದಲ್ಲಿ ಬೆಳೆದುನಿಂತ ಕಾಡುಮರಗಳು
ಅರಕಲಗೂಡು: ಗ್ರಾಮೀಣ ಪ್ರದೇಶದಲ್ಲಿ ಮರ ಗಿಡಗಳನ್ನು ಬೆಳೆಸುವ ಪರಿಪಾಠ ಕ್ಷೀಣಿಸಿ ಅವುಗಳ ಬುಡಕ್ಕೆ ಕೊಡಲಿ ಏಟು ನೀಡುತ್ತಿರುವ ಕಾಲಘಟ್ಟದಲ್ಲಿ ತಾಲೂಕಿನ ಮದಲಾಪುರ ಗ್ರಾಮದ ಪರಿಸರ ಪ್ರೇಮಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಗುಂಡು ತೋಪಿನಲ್ಲಿ ಬೆಳೆಸಿರುವ ಹಲವಾರು ಜಾತಿಯ ಗಿಡ ಮರಗಳು ಬೆಳೆದು ಪರಿಸರಕ್ಕೆ ಮಹತ್ತರವಾದ ಕೊಡುಗೆ ನೀಡಿವೆ.
ಈ ಭಾಗಕ್ಕೆ ಹೊಗೆಸೊಪ್ಪು ಬೆಳೆ ಕಾಲಿಟ್ಟ ನಂತರ ತಂಬಾಕು ಉತ್ಪಾದಿಸಲು ಮರಗಳ ಹನನ ಆರಂಭವಾಯಿತು. ಆದರೆ, ಅರೆಮಲೆನಾಡು ಪ್ರದೇಶವಾದ ಮಲ್ಲಿಪಟ್ಟಣ ಹೋಬಳಿ ಮದಲಾಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ವಿಶೇಷತೆ ಭಾಗವಾಗಿ ದಶಕದ ಹಿಂದೆ ವನ ಸಂವರ್ಧನ ದಿನ ಕಾರ್ಯಕ್ರಮ ಆಯೋಜಿಸಿ ನೆಟ್ಟ ಸಸಿಗಳು ಈಗ ಮರಗಳಾಗಿ ಬೆಳೆದು ಹಸಿರು ಸಂಪತ್ತಾಗಿದೆ.
ಅಂದು ನಿರ್ಜನ ಹಾಗೂ ಬಂಜರು ಪ್ರದೇಶದಂತಿದ್ದ ಗುಂಡುತೋಪು ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಹೊನ್ನೆ, ಬೂರ್ಗ, ಹೊಂಗೆ, ಬೇವು, ನೇರಳೆ, ಹಲಸು, ಬಸುರಿ, ಮತ್ತಿ ಸೇರಿದಂತೆ ಅನೇಕ ಕಾಡು ಜಾತಿಯ ಸಸಿಗಳನ್ನು ನೆಟ್ಟು, ನೀರುಣಿಸುವುದು, ಜಾನುವಾರುಗಳಿಂದ ರಕ್ಷಿಸಿದರ ಲವಾಗಿ ಇಂದು ಹೆಮ್ಮರಾಗಿವೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಹಿಂದೆ ಬೇಸಿಗೆ ಕಾಲದಲ್ಲಿ ತೀವ್ರ ಉಷ್ಣತೆ ಕಂಡುಬರುತ್ತಿದ್ದ ಪ್ರದೇಶದಲ್ಲಿ ಈಗ ತಂಪಾದ ವಾತಾವರಣ ನಿರ್ಮಾಣವಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಲು ಹಾಗೂ ಅಂತರ್ಜಲ ಮಟ್ಟ ಸುಧಾರಿಸಲು ಸಹ ಈ ಹಸಿರು ವನ ಸಹಕಾರಿಯಾಗಿದೆ ಎನ್ನಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ರಂಗಸ್ವಾಮಿ ಅವರ ಈ ಸೇವೆ ಗ್ರಾಮಸ್ಥರಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಒಂದು ಸಸಿ ನೆಟ್ಟರೆ ಅದು ಮುಂದಿನ ಪೀಳಿಗೆಗೆ ಅಮೂಲ್ಯ ಆಸ್ತಿಯಾಗುತ್ತದೆ ಎಂಬುದಕ್ಕೆ ಅವರ ಹಸಿರು ಸಾಧನೆಯೇ ಸಾಕ್ಷಿಯಾಗಿದೆ.
ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಯುವಜನತೆ ಸೇರಿದಂತೆ ಎಲ್ಲರೂ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಸಂಕಲ್ಪ ಕೈಗೊಳ್ಳಬೇಕೆಂಬ ಸಂದೇಶವನ್ನು ರಂಗಸ್ವಾಮಿ ಅವರ ಮೂರು ದಶಕಗಳ ಹಸಿರು ಸೇವೆ ಸಾರುತ್ತಿದೆ. ಎಲ್ಲ ಗಿಡಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದ್ದಕ್ಕೆ ಪರಿಸರಕ್ಕೆ ಉತ್ತಮ ಕೊಡುಗೆ ಕೊಟ್ಟ ಸಾರ್ಥಕಭಾವ ಮೂಡಿಸಿದೆ ಎನ್ನುತ್ತಾರೆ ರಂಗಸ್ವಾಮಿ.
ನಾವು ಬೆಳೆಸುವ ಪ್ರತಿಯೊಂದು ಮರ ನಾಳೆಯ ಶುದ್ಧ ಗಾಳಿ, ನೆರಳು ಮತ್ತು ಜೀವ ವೈವಿಧ್ಯದ ಆಶ್ರಯವಾಗುತ್ತದೆ. ಒಂದು ಸಸಿ ನೆಟ್ಟರೆ ಒಂದು ಜೀವ ಉಳಿಸಿದಂತೆ. ಒಂದು ಕಾಡು ಬೆಳೆಸಿದರೆ ಒಂದು ಭವಿಷ್ಯ ನಿರ್ಮಿಸಿದಂತೆ. ದಶಕದ ಹಿಂದೆ ತಮ್ಮೂರಿನಲ್ಲಿ ವನ ಸಂವರ್ಧನ ದಿನ ಹೆಸರಿನಲ್ಲಿ ಪರಿಸರ ಕಾರ್ಯಕ್ರಮ ನಡೆಸಿ ಗುಂಡು ತೋಪಿನಲ್ಲಿ ನೆಟ್ಟ ವಿವಿಧ ಕಾಡು ಜಾತಿಯ ನೂರಾರು ಗಿಡಗಳು ಇಂದು ಹೆಮ್ಮರವಾಗಿ ಬೆಳೆಸಿರುವುದು ಸಂತಸ ತಂದಿದೆ.
ಎಂ.ಆರ್.ರಂಗಸ್ವಾಮಿ ಪರಿಸರ ಪ್ರೇಮಿ
ಮದಲಾಪುರ ಗ್ರಾಮದ ಸರ್ಕಾರಿ ಶಾಲೆ ಹಿಂಭಾಗವೇ ಗುಂಡು ತೋಪಿನಲ್ಲಿ ಪರಸರ ಪ್ರೇಮಿ ರಂಗಸ್ವಾಮಿ ಅವರು ಗಿಡ ಮರಗಳನ್ನು ಬೆಳೆಸಿರುವುದರಿಂದ ಶಾಲೆಯ ವಾತಾವರಣ ಕೂಡ ತಂಪಾಗಿದೆ.