ಅರಸೀಕೆರೆ ನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಅರಸೀಕೆರೆ ನಗರದಲ್ಲಿ ಹಿಂದೂ ದಂಪತಿ ಮೇಲೆ ನಡೆದ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿವಿಟಿ ಬಸವರಾಜ್, ಗಿರೀಶ್, ಹರ್ಷವರ್ಧನ್, ಶಿವನ್ ರಾಜ್, ಕೃಷ್ಣ, ಶಿವಶಂಕರ್, ಅರುಣ್ ಕುಮಾರ್ ಇತರರಿದ್ದಾರೆ.
ಅರಸೀಕೆರೆ ನಗರದಲ್ಲಿ ಹಿಂದೂ ದಂಪತಿ ಮೇಲೆ ನಡೆದ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿವಿಟಿ ಬಸವರಾಜ್, ಗಿರೀಶ್, ಹರ್ಷವರ್ಧನ್, ಶಿವನ್ ರಾಜ್, ಕೃಷ್ಣ, ಶಿವಶಂಕರ್, ಅರುಣ್ ಕುಮಾರ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ದಂಪತಿ ಮೇಲೆ ಹಲ್ಲೆಗೆ ಖಂಡನೆ
  • ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ
ಅರಸೀಕೆರೆ: ನಗರದ ಎಪಿಎಂಸಿ ಗೇಟ್ ಬಳಿ ಹಿಂದೂ ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶನಿವಾರ ಕರೆ ನೀಡಿದ್ದ ಅರಸೀಕೆರೆ ನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ ಮಾಲೀಕರು ಬಂದ್‌ಗೆ ಬೆಂಬಲ ನೀಡಿದರು.
ಹಲ್ಲೆ ಖಂಡಿಸಿ ಒಗ್ಗೂಡಿದ ಹಿಂದೂ ಪರ ಸಂಘಟನೆಗಳ ಮುಖಂಡರು ಬಸವೇಶ್ವರ ವೃತ್ತದಿಂದ ಎಪಿಎಂಸಿ ಗೇಟ್‌ವರೆಗೂ ಬೃಹತ್ ಮೆರವಣಿಗೆ ನಡೆಸಿದರು. ಈ ಮೂಲಕ ಆರೋಪಿಗಳನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು. ರಸ್ತೆ ಮಧ್ಯೆ ಜಮಾಯಿಸಿದ ಪ್ರತಿಭಟನಾ ನಿರತರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು.
ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಮಾತನಾಡಿ, ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಆರೋಪಿಗಳ ವಿರುದ್ಧ ಕೇಸ್ ದಾಖಲಿಸುವ ಬದಲು ರಾಜಿ ಮಾಡಿಸಲು ಕಸರತ್ತು ಮಾಡಿದೆ. ಹಲ್ಲೆ ಮಾಡಿದ ಗೂಂಡಾಗಳ ವಿರುದ್ಧ ರೌಡಿಶೀಟ್ ತೆರೆದು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ವಕೀಲ ವಿವೇಕ್ ಮಾತನಾಡಿ, ಪೊಲೀಸರು ಕೇಸ್ ದಾಖಲಿಸಲು ಹಿಂದೇಟು ಹಾಕಿದರೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಬಹುಸಂಖ್ಯಾತರ ಒಗ್ಗಟ್ಟಿನ ಕೊರತೆ ಲಾಭ ಪಡೆದಿರುವ ಸಮಾಜ ವಿರೋಧಿಗಳು ದೇವಾಲಯಕ್ಕೆ ಹೋಗಿ ಬರುತ್ತಿದ್ದ ದಂಪತಿ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. ಘಟನೆಯ ಸಮಗ್ರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹೀಗಿದ್ದರೂ ಪೊಲೀಸರು ಆರೋಪಿಗಳನ್ನು ಇದೂವರೆಗೂ ಬಂಧಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ನಿರ್ಲಕ್ಷೃ ತೋರಿದರೆ ಅರಸೀಕೆರೆ ತಾಲೂಕು ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಹಿಂದೂಪರ ಸಂಘಟನೆಗಳ ಮುಖಂಡರಾದ ಕೃಷ್ಣ, ಶಿವಶಂಕರ್, ಅರುಣ್ ಕುಮಾರ್ ಇನ್ನಿತರರು ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಸಿ.ಗಿರೀಶ್, ಮಾಜಿ ಸದಸ್ಯರಾದ ಹರ್ಷವರ್ಧನ್ ರಾಜ್, ರಮೇಶ್ ನಾಯ್ಡು, ಶಿವನ್ ರಾಜ್, ವಾಸು, ಶಿವರಾಜ್, ಉಮೇಶ್ ಭೋವಿ, ಸಿದ್ದೇಶ್, ಸಿಂಧೂ ಸೇರಿದಂತೆ ನೂರಾರು ಯುವಕರು ಹೋರಾಟದ ನೇತೃತ್ವ ವಹಿಸಿದ್ದರು.
ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಎಸ್ಪಿ ತಮ್ಮಯ್ಯ ಭರವಸೆ ನೀಡಿದ ಬಳಿಕ ಹೋರಾಟ ಹಿಂಪಡೆಯಲಾಯಿತು. ಡಿವೈಎಸ್ಪಿ ಬಿ.ಆರ್.ಗೋಪಿ, ಸಿಪಿಐ ಅರುಣ್ ಕುಮಾರ್, ನಗರ ಠಾಣೆ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್, ಪಿಎಸ್‌ಐ ದಿಲೀಪ್ ಕುಮಾರ್ ಬಂದೋಬಸ್ತ್ ಒದಗಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net