ಹಾಸನ: ಬಿಸಿಲ ಬೇಗೆಯಲ್ಲಿ ಬಸವಳಿದಿದ್ದ ಇಳೆಗೆ ತಂಪೆರೆಯುವಂತೆ ಜಿಲ್ಲೆಯ ವಿವಿಧ ಕಡೆ ಸೋಮವಾರ ಸಂಜೆ ಮಳೆಯಾಗಿದೆ. ಬೇಲೂರು, ಅರಸೀಕೆರೆ ತಾಲೂಕು ಸೇರಿ ಹಲವೆಡೆ ಗಾಳಿ, ಗುಡುಗು, ಮಿಂಚು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಅಲ್ಲಲ್ಲಿ ಚರಂಡಿಗಳು ಕಟ್ಟಿಕೊಂಡು ರಸ್ತೆಯ ಮೇಲೆ ನೀರು ಹರಿದಿದೆ. ಪಾದಚಾರಿಗಳು, ಬೈಕ್ ಸವಾರರು ಪರದಾಡಿದರು. ಅರಸೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ನೀರು ಉಕ್ಕಿ ಹರಿದಿದ್ದು, ಕೆಲವು ಮಳಿಗೆಗಳಿಗೆ ನುಗ್ಗಿದೆ. ಪೂರ್ವ ಮುಂಗಾರು ಮಳೆ ಸಿಂಚನದಿಂದ ಬಿಸಿಲಿನ ಝಳಕ್ಕೆ ಬೆಂಡಾಗಿದ್ದ ಭೂಮಿ ಕೊಂಚ ತಣ್ಣಗಾಗಿದೆ.