ಗೃಹಬಳಕೆ ಗ್ಯಾಸ್ ಸಿಲಿಂಡರ್ ವಿತರಣೆಗೆ ಕ್ರಮ

ಗೃಹಬಳಕೆ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಹಾಗೂ ಸಾರ್ವಜನಿಕರ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಖುದ್ದಾಗಿ ಆಲೂರಿನ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಖಜಾಂಚಿ ಹೇಮಂತ್, ಬಿಜೆಪಿ ವಕ್ತಾರ ಮಾವನೂರು ಮೋಹನ್ ಇತರರು ಇದ್ದರು.
ಗೃಹಬಳಕೆ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಹಾಗೂ ಸಾರ್ವಜನಿಕರ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಖುದ್ದಾಗಿ ಆಲೂರಿನ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಖಜಾಂಚಿ ಹೇಮಂತ್, ಬಿಜೆಪಿ ವಕ್ತಾರ ಮಾವನೂರು ಮೋಹನ್ ಇತರರು ಇದ್ದರು.
Published on
ಆಲೂರು : ಗೃಹಬಳಕೆ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಖುದ್ದಾಗಿ ಖಾಸಗಿ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಂದರ್ಭ ಸರದಿ ಸಾಲಿನಲ್ಲಿ ನಿಂತಿದ್ದ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಹಕರು ಹಲವು ದಿನಗಳಿಂದ ಸಿಲಿಂಡರ್ ದೊರೆಯದೇ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ನೇರವಾಗಿ ಆರೋಪಿಸಿದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಹಾಗೂ ಏಜೆನ್ಸಿ ಅವರಿಗೆ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಿಳೆಯರು ಸೇರಿ ನೂರಾರು ಜನರು ಬೆಳಗಿನಿಂದಲೇ ಸಾಲಿನಲ್ಲಿ ನಿಂತು ಗ್ಯಾಸ್ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿರುವ ದೃಶ್ಯ ಕಂಡ ಶಾಸಕ ಸಿಮೆಂಟ್ ಮಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಕ್ಷಣವೇ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡುವಂತೆ ಸೂಚಿಸಿದ ಶಾಸಕರು ಸ್ಥಳಕ್ಕೆ ಮೂರು ಲಾರಿಗಳಲ್ಲಿ ಗ್ಯಾಸ್ ಸಿಲಿಂಡರ್ ತರಿಸಿ ಪಾರದರ್ಶಕವಾಗಿ ವಿತರಣೆ ಮಾಡುವಂತೆ ನಿರ್ದೇಶನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು,
ಈಗಾಗಲೇ ಗ್ಯಾಸ್ ವಿತರಣೆಯಲ್ಲಿ ತೊಂದರೆ ಉಂಟಾಗಿರುವುದು ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳ, ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳ ಹಾಗೂ ವಿತರಣಾ ಕಂಪನಿಗಳ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ.
ಸಿಲಿಂಡರ್ ಅಭಾವದ ಕಾರಣ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಂಡುಹಿಡಿಯಲು ಸೂಚನೆ ನೀಡಿದ್ದೇನೆ. ಸದ್ಯದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. ಗ್ರಾಹಕರು ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಆಲೂರು ತಾಲೂಕಿನ ಯಾವುದೇ ಕುಟುಂಬಕ್ಕೂ ಗೃಹಬಳಕೆ ಗ್ಯಾಸ್ ಸಿಲಿಂಡರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಲೂರು ಕಟ್ಟಾಯ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಖಜಾಂಚಿ ಹೇಮಂತ್, ಬಿಜೆಪಿ ವಕ್ತಾರ ಮಾವನೂರು ಮೋಹನ್, ಮುಖಂಡರಾದ ಹೊಳೆಬೆಳ್ಳೂರು ಕಿರಣ್ ಮುಂತಾದವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net