ಬಿಳಿಸುಳಿ ಬಾಧೆ ತಡೆಗೆ ವೈಜ್ಞಾನಿಕ ಕ್ರಮ ಅನುಸರಿಸಿ

ಮುಸುಕಿನ ಜೋಳಕ್ಕೆ ಬಿಳಿ ಸುಳಿ ಕೀಟದ ಹಾವಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ಹೆಬ್ಬಾಳು ಸಮೀಪದ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
ಮುಸುಕಿನ ಜೋಳಕ್ಕೆ ಬಿಳಿ ಸುಳಿ ಕೀಟದ ಹಾವಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ಹೆಬ್ಬಾಳು ಸಮೀಪದ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
Published on
ಬೇಲೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆಗೆ ಬಿಳಿ ಸುಳಿ(ವೈಟ್ ಗ್ರಬ್)ಕೀಟದ ಹಾವಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಸಕಲೇಶಪುರ ಉಪ ಕೃಷಿ ನಿರ್ದೇಶಕ ಡಾ.ಪ್ರಭಾಕರ್, ಬೇಲೂರು ಸಹಾಯಕ ಕೃಷಿ ನಿರ್ದೇಶಕ ಕಾಂತರಾಜ್ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
ಕೃಷಿ ಅಧಿಕಾರಿಗಳು ಬೆಳೆ ಪರಿಶೀಲಿಸಿ ಕೀಟದ ಹಾವಳಿ ಪ್ರಮಾಣ, ಉಂಟಾಗಿರುವ ಹಾನಿ ಹಾಗೂ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಸ್ಥಳದಲ್ಲೇ ಮಾಹಿತಿ ನೀಡಿದರು.
ಬಿಳಿ ಸುಳಿ ಕೀಟದ ಬಾಧೆಯಿಂದ ಜೋಳದ ಗಿಡಗಳು ಬೆಳವಣಿಗೆ ಕುಂಠಿತವಾಗುವುದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೇರುಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ರೈತರು ನಿರಂತರವಾಗಿ ಬೆಳೆ ಪರಿಶೀಲಿಸುವಂತೆ ಸಲಹೆ ನೀಡಿದರು.
ಕೀಟದ ಹಾವಳಿ ಪ್ರಾರಂಭಿಕ ಹಂತದಲ್ಲೇ ಪತ್ತೆಯಾದರೆ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಆದ್ದರಿಂದ ಹೊಲಗಳಲ್ಲಿ ನಿಯಮಿತವಾಗಿ ನಿಗಾ ವಹಿಸಿ, ಸೋಂಕಿತ ಗಿಡಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ ಶಿಫಾರಸಿನಂತೆ ಕೀಟ ನಾಶಕ ಬಳಸಬೇಕು. ಸ್ವಯಂ ನಿರ್ಧಾರದಿಂದ ಔಷಧ ಸಿಂಪಡಿಸುವ ಬದಲು ಕೃಷಿ ಅಧಿಕಾರಿಗಳ ಸಲಹೆ ಪಡೆದು ವೈಜ್ಞಾನಿಕ ಕ್ರಮ ಅನುಸರಿಸಬೇಕು ಎಂದು ಡಾ.ಪ್ರಭಾಕರ್ ಸಲಹೆ ನೀಡಿದರು.
ಜಮೀನಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಳೆ ನಿಯಂತ್ರಣ, ಸಮತೋಲಿತ ಪೋಷಕಾಂಶ ನಿರ್ವಹಣೆಯೂ ಬೆಳೆ ರಕ್ಷಣೆಗೆ ಸಹಕಾರಿಯಾಗಲಿದೆ. ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳ ಬಗ್ಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ ನೀಡುವುದಲ್ಲದೆ ಮುಂದಿನ ದಿನಗಳಲ್ಲಿ ಬೆಳೆಗಳ ಮೇಲೆ ನಿಗಾ ವಹಿಸಿ ರೈತರಿಗೆ ಅಗತ್ಯ ನೆರವು ನೀಡಲಿದ್ದಾರೆ ಎಂದರು.
ಬೇಲೂರು ಸಹಾಯಕ ಕೃಷಿ ನಿರ್ದೇಶಕ ಕಾಂತರಾಜ್ ಮಾತನಾಡಿ, ಸಾಮಾನ್ಯವಾಗಿ ಈ ರೋಗವು ಶಿಲೀಂಧ್ರದಿಂದ ಬರುತ್ತದೆ. ರೋಗ ತಗುಲಿದ ಬೆಳೆಯಲ್ಲಿ ಬೂದು ಬಣ್ಣದ ಶಿಲೀಂಧ್ರವು ಎಲೆಗಳ ತಳ ಮತ್ತು ಮೆಲ್ಭಾಗದಲ್ಲಿ ಕಂಡುಬರುತ್ತದೆ. ಎಲೆಗಳ ಮೇಲೆ ಬಿಳಿ ಮತ್ತು ಹಳದಿ ಉದ್ದನೆ ಪಟ್ಟಿಗಳು ಕಾಣಿಸಿಕೊಂಡು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮತ್ತು ಬಿಳಿಯಾಗಿ ಗಿಡಗಳ ಬೆಳವಣಿಗೆ ಕುಂಠಿತವಾಗಿ ಎಲೆಗಳು ಒಣಗಿ ಉದುರುತ್ತವೆ ಎಂದರು.
ವಾತಾವರಣದಲ್ಲಿ ಹೆಚ್ಚು ತೇವಾಂಶ, ತುಂತುರು ಮಳೆ ಹನಿ, ಮೋಡ ಕವಿದ ವಾತಾವರಣ, ಮಂಜು ಹನಿಯಿಂದ ಎಲೆಗಳು ದೀರ್ಘ ಸಮಯ ಒದ್ದೆಯಾಗಿರುವುದು, ಮಿತವಾದ ತಾಪಮಾನ ಮತ್ತು ಹೆಚ್ಚು ಆರ್ದ್ರತೆ, ಹಿಂದಿನ ಬೆಳೆಗಳಲ್ಲಿ ಉಳಿದುಕೊಂಡಿದ್ದ ಶಿಲೀಂಧ್ರವು ಹರಡುವ ಸಾಧ್ಯತೆ ಇರುತ್ತದೆ. ರೋಗ ತಗುಲಿದ ಗಿಡಗಳನ್ನು ಕಿತ್ತು ನಾಶಪಡಿಸಿ ಸಮತೋಲನವಾಗಿ ಗೊಬ್ಬರ ಬಳಸಬೇಕು. ಆದರೆ, ಅತಿಯಾದ ಸಾರಜನಕದ ಗೊಬ್ಬರ ನೀಡಬಾರದು. ರೋಗದ ಹತೋಟಿಗೆ 2.0 ಗ್ರಾಂ ಮೆಟಲಾಕ್ಸೆಲ್ ಹಾಗೂ ಮ್ಯಾಂಕೋಜೆಬ್ ಅಥವಾ 2.0 ಮಿ.ಲೀ. ಮೆಟಲಾಕ್ಸೆಲ್ ಹಾಗೂ ಕ್ಲೋರೋಥಲನಿಲ್‌ನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದರು.
ಹಳೇಬೀಡು ಕೃಷಿ ಅಧಿಕಾರಿ ಹೇಮಾಂತ್, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಕೃಷಿ ಇಲಾಖೆ ಲತಾ, ಗ್ರಾಮದ ರೈತರು, ಕೃಷಿ ಸಹಾಯಕರು ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net