ಆರಂಭದಲ್ಲಿ ಸ್ವಂತ ವ್ಯಾಪಾರ, ಕಂಟ್ರಾೃಕ್ಟ್ ಕೆಲಸ ಮಾಡಿದರು. ಆದರೆ ಯಶಸ್ಸು ಸಿಗಲಿಲ್ಲ. ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಕೃಷಿ ಮಾಡಲು ಆಲೋಚಿಸಿ ಕೊಳವೆಬಾವಿ ಕೊರೆಸಿದರು. ಆದರೆ ನೀರು ಬಾರದ ಕಾರಣ ತಮ್ಮ ಮನೆ ಬಳಿಯೇ ಕೊಳವೆ ಬಾವಿ ಕೊರೆಸಿ ಎರಡು ಕಿ.ಮೀ. ದೂರವಿರುವ ಜಮೀನಿಗೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಿ ಕೃಷಿ ಹೊಂಡ ತೋಡಿಸಿ ನೀರು ಸಂಗ್ರಹಣೆ ಮಾಡಿದರು. ಆರಂಭದಲ್ಲಿ ತರಕಾರಿ ಬೆಳೆದರಾದರೂ ಮಧ್ಯವರ್ತಿಗಳಿಂದಾಗಿ ಲಾಭ ಸಿಗಲಿಲ್ಲ. ನಂತರ ಹೂ ಬೆಳೆಯಲು ನಿರ್ಧರಿಸಿ ಅನುವಿ ರೈತರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಮಾಲೂರು, ದೊಡ್ಡಬಳ್ಳಾಪುರ, ಮೈಸೂರು, ಬೆಂಗಳೂರು ಸೇರಿದಂತೆ ಹೆಚ್ಚು ಹೂ ಬೆಳೆಯುವ ಪ್ರದೇಶಗಳಲ್ಲಿ ಸುತ್ತಾಡಿ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.