ಗೃಹಬಳಕೆ, ವಾಣಿಜ್ಯ ಎಲ್‌ಪಿಜಿ ಪೂರೈಕೆ ವ್ಯತ್ಯಯ ಸರಿಪಡಿಸಿ

ಸಂಸದ ಶ್ರೇಯಸ್ ಪಟೇಲ್
ಸಂಸದ ಶ್ರೇಯಸ್ ಪಟೇಲ್
Published on

ಪ್ರಮುಖ ಮುಖ್ಯಾಂಶಗಳು

  • ಗೃಹಬಳಕೆ, ವಾಣಿಜ್ಯ ಎಲ್‌ಪಿಜಿ ಪೂರೈಕೆ ವ್ಯತ್ಯಯ ಸರಿಪಡಿಸಿ
  • ಕೇಂದ್ರ ಸರ್ಕಾರಕ್ಕೆ ಸಂಸದ ಶ್ರೇಯಸ್ ಎಂ.ಪಟೇಲ್ ಪತ್ರ
ಹಾಸನ: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಿಲ್ಲೆಯಲ್ಲಿ ಎಲ್‌ಪಿಜಿ, ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವಾಲಯದ ರಾಜ್ಯ ಸಚಿವ ಸುರೇಶ್ ಗೋಪಿ ಅವರಿಗೆ ಪತ್ರ ಬರೆದು ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಗ್ರಾಹಕರು, ವಿತರಕರು ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳು ಎದುರಿಸುತ್ತಿರುವ ಕೆಲವು ಪ್ರಾಯೋಗಿಕ ಸಮಸ್ಯೆ ಕುರಿತು ನಿಮ್ಮ ಗಮನಕ್ಕೆ ತಂದಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಸ್ತುತ ಎಲ್‌ಪಿಜಿ ರಿಫಿಲ್ ಬುಕ್ಕಿಂಗ್ ಅವಧಿ ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಯುಕ್ತ ಕುಟುಂಬಗಳು ಹೆಚ್ಚು ಇರುವುದರಿಂದ ಹಾಗೂ ಎಲ್‌ಪಿಜಿ ಮೇಲಿನ ಅವಲಂಬನೆ ಹೆಚ್ಚಿರುವುದರಿಂದ, 45 ದಿನಗಳ ಅವಧಿ ಕೆಲವೊಮ್ಮೆ ಗೃಹ ಬಳಕೆ ನಿರ್ವಹಿಸಲು ಅಡಚಣೆ ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಗ್ರಾಮೀಣ ಪ್ರದೇಶಗಳಿಗಾಗಿ ಬುಕ್ಕಿಂಗ್ ಅವಧಿಯನ್ನು ಮರು ವಿಮರ್ಶಿಸಿ, ಅದನ್ನು ಸುಮಾರು 30-35 ದಿನಗಳಿಗೆ ಕಡಿಮೆ ಮಾಡುವ ಸಾಧ್ಯತೆ ಪರಿಗಣಿಸುವಂತೆ ವಿನಮ್ರವಾಗಿ ವಿನಂತಿಸಿದ್ದಾರೆ.
ಒಟಿಪಿ ಆಧಾರಿತ ಡೆಲಿವರಿ ದೃಢೀಕರಣವನ್ನು ಈಗ ಶೇ.50ರಿಂದ 100 ಕಡ್ಡಾಯಗೊಳಿಸಲಾಗಿದೆ. ಇದರ ಉದ್ದೇಶ ಶ್ಲಾಘನೀಯವಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಕೆಳಗಿನ ಸಮಸ್ಯೆಗಳು ಎದುರಾಗುತ್ತಿವೆ. ಮೊಬೈಲ್ ನೆಟ್‌ವರ್ಕ್ ಕೊರತೆ, ಡಿಜಿಟಲ್ ತಿಳಿವಳಿಕೆ ಕಡಿಮೆ, ಹಿರಿಯ ನಾಗರಿಕರು ಮತ್ತು ಅಕ್ಷರ ಜ್ಞಾನ ಇಲ್ಲದವರು ಅನುಭವಿಸುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಕೆಳಗಿನ ಕ್ರಮ ಪರಿಗಣಿಸುವಂತೆ ವಿನಂತಿಸಿದ್ದಾರೆ. ಒಟಿಪಿ ಅನುಸರಣೆ ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸ್ವಲ್ಪ ಸಡಿಲಿಕೆ ನೀಡಬೇಕು, ಬಾರ್ಕೋಡ್ ಅಥವಾ ಕ್ಯುಆರ್ ಆಧಾರಿತ ಪರ್ಯಾಯ ದೃಢೀಕರಣ ವ್ಯವಸ್ಥೆಗಳನ್ನು ಪರಿಚಯಿಸುವುದು, ಇದರಿಂದ ಕೊನೆಯ ಹಂತದ ವಿತರಣೆ ಸುಲಭವಾಗುತ್ತದೆ.
ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಲಭ್ಯತೆ ಯಾವಾಗಲೂ ಸಮರ್ಪಕವಾಗಿಲ್ಲವೆಂದು ಗಮನಕ್ಕೆ ಬಂದಿದೆ. ಇದರಿಂದ ಹೋಟೆಲ್‌ಗಳು ಮತ್ತು ಸಣ್ಣ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಹೋಟೆಲ್ ಮತ್ತು ಸಣ್ಣ ವ್ಯಾಪಾರ ಸಂಘಟನೆಗಳು ಚಿಂತಾಕ್ರಾಂತರಾಗಿದ್ದಾರೆ.
19 ಕೆ.ಜಿ. ಸಿಲಿಂಡರ್‌ಗಳು ಹಿಂದಿನಂತೆ ಸರಬರಾಜು ಕಡಿಮೆಯಾಗಿದೆ ಎಂಬ ಅಭಿಪ್ರಾಯವಿದ್ದು, ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ಮೇಲಿನ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಗ್ರಾಮೀಣ ಮನೆಗಳು ಮತ್ತು ಸಣ್ಣ ವಾಣಿಜ್ಯ ಬಳಕೆದಾರರಿಗೆ ಎಲ್‌ಪಿಜಿ ಲಭ್ಯತೆ ಮತ್ತು ವಿತರಣೆ ಸುಧಾರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net