ಅರಸೀಕೆರೆ: ಅಭಿವೃದ್ಧಿ ನನ್ನ ಮೊದಲ ಆದ್ಯತೆ. ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸುಳ್ಳು ಹೇಳುವುದಿಲ್ಲ, ನಂಬಿ ಬಂದ ಮುಖಂಡರನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿರುವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದಲ್ಲಿ ಸೆಸ್ಕ್ ವತಿಯಿಂದ ಕೇಬಲ್ ಅಳವಡಿಕೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ನಾಲ್ಕು ಬಾರಿ ಶಾಸಕನನ್ನಾಗಿ ಕ್ಷೇತ್ರದ ಜನರು ಆಯ್ಕೆ ಮಾಡಿದ್ದಾರೆ. ಎಚ್‌ಡಿಡಿ ಕುಟುಂಬದ ಜತೆಗೆ ಹೋದರೆ ಮಂತ್ರಿ ಆಗಲು ಸಾಧ್ಯವಿಲ್ಲ ಎಂಬುದನ್ನು ತಿಳಿದೇ ಕಾಂಗ್ರೆಸ್ ಸೇರಿದ್ದೇನೆ. ಇವರಿಗೆ ಮಾತ್ರ ಆಸೆಯಿದೆ, ನಮಗಿಲ್ಲವೇ. ನನ್ನ ರಾಜಕೀಯ ಏಳಿಗೆ ಸಹಿಸದ ಕೆಲವರು ಬಿದ್ದು ಹೋಗುವ ಎತ್ತು ಕರೆತಂದು ಪ್ರಚಾರಕ್ಕೆ ಹೊರಟಿದ್ದಾರೆ. ದೇಗುಲಕ್ಕೆ ಹಣ ಕೇಳಿದಾಗ ಕೊಟ್ಟಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ಮಾತಿನ ಪ್ರಹಾರ ನಡೆಸಿದರು.
ಕ್ಷೇತ್ರದ ವಿದ್ಯುತ್ ಕ್ಷಾಮ ಮನಗಂಡು ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಪಾರ್ಕ್ ಆರಂಭಿಸಿದ್ದು, ಶೀಘ್ರದಲ್ಲೇ ರೈತರ ಕೊಳವೆ ಬಾವಿಗಳಿಗೆ ಸಂಪರ್ಕ ಸಿಗಲಿದ್ದು ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ. ಎತ್ತಿನಹೊಳೆ ನೀರು ತರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇನ್ನೆರಡು ತಿಂಗಳಲ್ಲಿ ಕೆರೆಗಳಿಗೆ ಗಂಗೆ ಧುಮ್ಮಿಕ್ಕಲಿದೆ. ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಆರೋಪ ಮಾಡಲಾಗುತ್ತಿದೆ. ನಗರದ ಪರಿಮಿತಿಯಲ್ಲಿ ಕೇಬಲ್ ಅಳವಡಿಕೆಗೆ ಚಾಲನೆ ದೊರೆತಿದ್ದು, ಸೆಸ್ಕ್ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಸೆಸ್ಕ್ ಎಇಇ ಜಯಪ್ಪ, ಪೌರಾಯುಕ್ತ ಕೃಷ್ಣಮೂರ್ತಿ, ತಾಪಂ ಇಒ ಗಂಗಣ್ಣ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಬಾಲಮುರುಗನ್, ಮನುಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಸಮೀವುಲ್ಲಾ, ವೆಂಕಟಮುನಿ, ಜಿ.ಟಿ.ಗಣೇಶ್ ಇತರರಿದ್ದರು.