ಹಿರೀಸಾವೆ: ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಜೂ.27 ಶನಿವಾರ ಬೆಳಗ್ಗೆ 10.30ಕ್ಕೆ ಕೃಷಿ ಸಾಧಕರ ಸಮಾಲೋಚನಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಾವಯವ ಕೃಷಿಕ ಎಚ್.ಪಿ.ರಾಜು ತಿಳಿಸಿದ್ದಾರೆ.
ಪಟ್ಟಣದ ಸುವರ್ಚಲಾದೇವಿ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ, ರೈತ ಸಂಘ, ಕಾಡು ಕೃಷಿ ಕುಟುಂಬ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಹಾಗೂ ರೈತರ ಉಳಿವಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದಕ್ಕೂ ಮೊದಲು ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ವೇದಿಕೆಯ ಮೇಲೆ ರೈತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಸಂವಾದ ಮತ್ತು ಸಮಾಲೋಚನೆ ಜರುಗಲಿದೆ ಎಂದು ತಿಳಿಸಿದರು.
ಕೃಷಿ ಸಾಧಕರಾದ ಸಿ.ಡಿ.ಕುಮಾರ್, ಹೀರತ್ತಿಗೌಡ, ಸೋಮಣ್ಣ, ಬಳದರೆ ಮಂಜು ಸೇರಿದಂತೆ ಹತ್ತಾರು ಮಂದಿ ಪ್ರಮುಖ ಸಾವಯವ ಕೃಷಿ ಸಾಧಕರು ಮತ್ತು ಕೃಷಿ ಸಂಶೋಧಕರು ಪಾಲ್ಗೊಳ್ಳಲಿದ್ದು, ಕಾಡು ಕೃಷಿ, ಯುವ ಸಮುದಾಯವನ್ನು ಕೃಷಿಯತ್ತ ಸೆಳೆಯುವ ಹಾಗೂ ಸರ್ಕಾರದ ಗಮನ ಸೆಳೆಯುವ ಬಗ್ಗೆ ಸಂವಾದ ಜರುಗಲಿದೆ.
ಹೋಬಳಿ ವ್ಯಾಪ್ತಿಯ ಸುಮಾರು 300ಕ್ಕೂ ಹೆಚ್ಚು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.