ಬೆಲೆ ಕುಸಿತದಿಂದ ರೊಚ್ಚಿಗೆದ್ದ ರೈತಪಿ ವರ್ಗ

ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಖಂಡಿಸಿ ರೈತರು ಕೆಲ ಕಾಲ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಖಂಡಿಸಿ ರೈತರು ಕೆಲ ಕಾಲ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ
  • ಮರು ಆರಂಭ
ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ಪ್ರಕ್ರಿಯೆ ಗುರುವಾರ ಮರು ಆರಂಭಗೊಂಡಿದ್ದು ಬೆಲೆ ಕುಸಿತದಿಂದ ರೊಚ್ಚಿಗೆದ್ದ ರೈತರು ವರ್ತಕರೊಂದಿಗೆ ಮಾತಿನ ಚಕಮಕಿ ನಡೆಸಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಉತ್ತಮ ಗುಣಮಟ್ಟದ ಒಂದು ಕೆಜಿ ತಂಬಾಕಿಗೆ 3200 ರೂ. ನೀಡದೆ ಕೆಲವೇ ಬೇಲ್ಗಳಿಗೆ ನೀಡಲಾಗುತ್ತಿದ್ದು 310 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್‌ಗೂ ಮುನ್ನ ಕೇಂದ್ರ ಸರ್ಕಾರ ತಂಬಾಕು ಮೇಲಿನ ಅಬಕಾರಿ ಸುಂಕ ಮತ್ತು ಜಿಎಸ್ಟಿ ದರ ಏರಿಕೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ತಂಬಾಕು ಖರೀದಿಸುವ ಕಂಪನಿಗಳು ತಂಬಾಕು ಹರಾಜು ಪ್ರಕ್ರಿಯೆಯನ್ನು ಜ. 23ರಿಂದ ಸ್ಥಗಿತಗೊಳಿಸಿದ್ದವು. ಇದರಿಂದ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಮುಂದಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಶಾಸಕ ಮಂಜು ಅವರು ತಂಬಾಕು ಮಂಡಳಿ, ಐಟಿಸಿ ಕಂಪನಿ ಅಧಿಕಾರಿಗಳು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಕೇಂದ್ರ ಸರ್ಕಾರದ ಅಬಕಾರಿ ಸುಂಕವನ್ನು ಹಿಂಪಡೆದರು. ಇದೀಗ ತಂಬಾಕು ಖರೀದಿ ಪ್ರಕ್ರಿಯೆಯನ್ನು ವರ್ತಕರು ಮುಂದುವರಿಸಿದ್ದಾರೆ.
ಇಂದಿನ ಮಾರುಕಟ್ಟೆಯಲ್ಲಿ 11ಕಂಪನಿಗಳು ತಂಬಾಕು ಖರೀದಿಯಲ್ಲಿ ತೊಡಗಿದ್ದು, ಗುಣಮಟ್ಟದ ತಂಬಾಕು ಕೆಜಿ ಗೆ 311ರೂ. ದೊರೆತಿದೆ.ಈ ಹಿಂದೆ 321 ರೂ.ತನಕ ಬೆಲೆ ದೊರೆತಿತ್ತು. ಎರಡು ವಾರ ತಡವಾಗಿ ಮರು ಆರಂಭಗೊಂಡಿರುವ ಮಾರುಕಟ್ಟೆಯಲ್ಲಿ ಕೆ.ಜಿ.ತಂಬಾಕಿಗೆ 322 ರಿಂದ 330ರೂ. ತನಕ ಬೆಲೆ ದೊರೆಯಬಹುದೆಂಬ ಭರವಸೆಯಲ್ಲಿದ್ದ ಬೆಳೆಗಾರರಿಗೆ ದಿಢೀರ್ 10ರೂ. ದರ ಇಳಿಕೆ ಯಾದ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಬೆಳೆಗಾರರ ಸಂಘದ ಮುಖಂಡರು ಭಾಗಿಯಾಗಿ ಬೆಲೆ ಇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಮಾರುಕಟ್ಟೆ ಈಗಾಗಲೇ ಸ್ಥಗಿತಗೊಂಡು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈಗ ಪುನಃ ಹೋರಾಟ ಮಾಡಿ ಮತ್ತೆ ಬಂದ್ ಮಾಡುವ ಬದಲು ಸ್ಥಿರವಾದ ಬೆಲೆ ನಿಗದಿಮಾಡಿ ಬೇಲ್‌ಗಳನ್ನು ಖರೀಸುವಂತೆ ಕೆಲವು ಬೆಳೆಗಾರರು ಮನವಿ ಮಾಡಿದ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು. ಆದರೂ ಕೂಡ ಬೆಲೆ ಸ್ಥಿರತೆಯನ್ನು ಕಾಣದೆ ರೈತರು, ವರ್ತಕರು ಮತ್ತು ಮಂಡಳಿ ನಡುವಿನ ಹಗ್ಗಜಗ್ಗಾಟದ ನಡುವೆಯೂ ಗುಣಮಟ್ಟದ ಕೆ.ಜಿ.ತಂಬಾಕು 310ರಿಂದ 311ರೂ., ಕನಿಷ್ಠ ದರ 210 ರೂ. ಮತ್ತು ಸರಾಸರಿ 272.58 ರೂ. ದರ ದೊರೆಯಿತು. ಈ ಹಿಂದೆ ಸರಾಸರಿ ದರ 284.98ರೂ. ದೊರೆತಿತ್ತು. ಸರಾಸರಿ ದರದಲ್ಲಿಯೂ ಕೂಡ 12.4ರೂ. ಬೆಲೆ ಕಡಿತಗೊಂಡಿತು.
ಕಡಿಮೆ ಕಂಪನಿ ಭಾಗಿ: ಹಲವು ದಿನಗಳ ನಂತರ ಮಾರುಕಟ್ಟೆ ಆರಂಭಗೊಂಡಿದ್ದು, ಎಂದಿನಂತೆ 25 ಕಂಪನಿಗಳು ತಂಬಾಕು ಖರೀದಿಯಲ್ಲಿ ಭಾಗಿಯಾಗಬೇಕಿತ್ತು. ಇಂದು 11 ಕಂಪನಿಗಳು ಮಾತ್ರ ಭಾಗಿಯಾಗಿವೆ.
ಹರಾಜು ಮಾರುಕಟ್ಟೆ-7ರಲ್ಲಿ ಒಟ್ಟು 521ಬೇಲ್‌ಗಳು ಬಂದಿದ್ದವು.ಅವುಗಳಲ್ಲಿ 411 ಸೋಲ್ಡ್ ಆಗಿವೆ.ಉತ್ತಮ ಗುಣಮಟ್ಟದ ಕೆ.ಜಿ.ತಂಬಾಕಿಗೆ ರೂ 311ರೂ., ಕನಿಷ್ಠ 210 ರೂ. ಮತ್ತು ಸರಾಸರಿ 272.58 ರೂ. ಬೆಲೆ ದೊರೆತಿದೆ. ಮುಂದಿನ ಮಾರುಕಟ್ಟೆಯಲ್ಲಿ ಉಳಿದ ಎಲ್ಲ ಕಂಪನಿಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹರಾಜು ಅಧೀಕ್ಷಕಿ ಸವಿತಾ ತಿಳಿಸಿದರು.
ರೈತರಿಗೆ ಬೆಲೆ ಸ್ಥಿರತೆ ಸಿಕ್ಕಿಲ್ಲ: ಇಂದಿನ ಮಾರುಕಟ್ಟೆಯಲ್ಲಿನ ಬೆಲೆಯನ್ನು ಕಂಡರೆ ಭಯವಾಗುತ್ತಿದೆ. ಇಲ್ಲಿ ಮಂಡಳಿ, ಕೇಂದ್ರ ಸರ್ಕಾರ ನೆರವಿಗೆ ಬಂದಂತೆ ಕಾಣುತ್ತಿಲ್ಲ. ಅಬಕಾರಿ ಸುಂಕ, ಜಿಎಸ್ಪಿಗಳನ್ನು ಹಿಂದಕ್ಕೆ ಪಡೆದಿರುವ ಹೇಳಿಕೆಗಳು ಜಾರಿಗೆ ಬಂದಂತೆ ಕಾಣುತ್ತಿಲ್ಲ. 45 ಸಾವಿರ ಕೋಟಿ ರೂ. ರಪ್ತು ಸುಂಕವನ್ನು ತಂದುಕೊಡುವ ತಂಬಾಕು ಬೆಳೆಗಾರರಿಗೆ ಬೆಲೆ ಸಿಗುತ್ತಿಲ್ಲ. ಮುಕ್ತ ವ್ಯಾಪಾರ ಮಾಡಿದರೆ ಬೆಳೆಗಾರರಿಗೆ ಬರೆ ಎಂದಿಗೂ ಇರಲ್ಲ. ವರ್ತಕರನ್ನು ಉದ್ಧಾರ ಮಾಡಿ ರೈತರನ್ನು ಶೋಷಣೆಗೆ ತಳ್ಳುವ ಕೆಲಸ ಪ್ರತಿ ವರ್ಷವೂ ನಡೆಯುತ್ತಿದೆ ಎಂದು ರೈತ ಮುಖಂಡ ಸೀಬಳ್ಳಿ ಯೋಗಣ್ಣ ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net