ಆಲೂರು: ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ, ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಲೂರು ಪಟ್ಟಣ ಪಂಚಾಯಿತಿಂದ ಗುರುವಾರ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಸ್ವಚ್ಛತಾ ಕೆಲಸವು ದೇವರ ಕೆಲಸವಾಗಿದೆ ಎಂದು ಜನರು ಭಾವಿಸಬೇಕು. ಸಾರ್ವಜನಿಕರು ತಮ್ಮ ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಪಟ್ಟಣ ಪಂಚಾಯಿತಿಯಿಂದ ನಿಯೋಜಿಸಿರುವ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು. ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ವಿಲೇವಾರಿ ವಾಹನಗಳಿಗೆ ನೀಡಬೇಕು. ಕವರ್, ಪ್ಲಾಸ್ಟಿಕ್ ಗ್ಲಾಸ್ ನಿಷೇಧಿಸಿ ಬಟ್ಟೆ ಬ್ಯಾಗ್‌ಗಳನ್ನು ಉಪಯೋಗಿಸಬೇಕು. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮುಂದುವರಿಸಿದ್ದೇ ಆದಲ್ಲಿ ಅದನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೆಇಬಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಶರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಪೊಲೀಸ್ ಇಲಾಖೆ ಸಿಬ್ಬಂದಿ ರಘು ನಂದನ್, ಪದವಿ ಕಾಲೇಜು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.