ರೌಡಿಶೀಟರ್ ಮಂಜೇಶ್ ಕೊಲೆಗೆ ಹಗೆತನ ಕಾರಣ

ಎಸ್ಪಿ ಶುಭಾನ್ವಿತಾ
ಎಸ್ಪಿ ಶುಭಾನ್ವಿತಾ
Published on

ಪ್ರಮುಖ ಮುಖ್ಯಾಂಶಗಳು

  • ರೌಡಿಶೀಟರ್ ಮಂಜೇಶ್ ಕೊಲೆಗೆ ಹಗೆತನ ಕಾರಣ
  • ಎಸ್ಪಿ ಶುಭಾನ್ವಿತಾ ಮಾಹಿತಿ
  • ಕೊಲೆ ಆರೋಪಿ ಪರಮೇಶ್ ಆಪ್ತ ಸ್ನೇಹಿತ

ಹಾಸನ:

ಬೆಂಗಳೂರಿನ ರೌಡಿಶೀಟರ್ ಮಂಜೇಶ್ ಕುಮಾರ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು, ಒಬ್ಬನ ಜೀವ ತೆಗೆಯಲು 14 ವರ್ಷದ ಹಗೆತನ ಕಾರಣ ಎಂಬ ರಹಸ್ಯ ಬಯಲಾಗಿದೆ. ಕೊಲೆಯಾದ ಮಂಜೇಶ್ ಮತ್ತು ಎ1 ಆರೋಪಿ ಪರಮೇಶ್ ಒಂದು ಕಾಲದಲ್ಲಿ ಸ್ನೇಹಿತರು. ಇಬ್ಬರು, ಮತ್ತವರ ಸಹಚರರು, ಒಟ್ಟಾಗಿಯೇ ಅನೇಕ ಕೊಲೆ, ಸುಲಿಗೆ ಇತ್ಯಾದಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಆದರೆ 2012 ರಲ್ಲಿ ನಡೆದ ಒಂದು ಕೊಲೆ ನಂತರ ಇಬ್ಬರ ನಡುವೆ ಹಗೆತನ ಬೆಳೆಯಿತು. ವರ್ಷದಿಂದ ವರ್ಷಕ್ಕೆ ಮತ್ಸರ ಬಲಿಯ ತೊಡಗಿತು. ಅದೀಗ ಮಂಜೇಶನ ಕೊಲೆಯಲ್ಲಿ ಅಂತ್ಯವಾಗಿದೆ. ನಿಜವಾದ ಕಾರಣ ಏನು ಎಂಬುದರ ಬಗ್ಗೆ ಇನ್ನೂ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಶುಭಾನ್ವಿತಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16 ಮಂದಿ ಬಂಧನ: ಕಳೆದ ಜೂ.7 ರ ತಡರಾತ್ರಿ ನಡೆದ ಮಂಜೇಶ್ ಕೊಲೆ ಪ್ರಕರಣ ಸಂಬಂಧ ಈವರೆಗೆ 16 ಹಂತಕರನ್ನು ಬಡಾವಣೆ ಪೊಲೀಸರು ಹಾಗೂ ತನಿಖಾ ತಂಡ ಬಂಧಿಸಿದೆ. ಎ1 ಆರೋಪಿ ಪರಮೇಶ್, ಪುನೀತ್, ಶಶಿಧರ್, ಜಯಂತ್, ರಾಕೇಶ್, ಯಲ್ಲಾಲಿಂಗ, ಸಾಯಿನಾಥ್, ಬಿ.ಆರ್.ಭರತ್, ಆದಿತ್ಯ, ಎಂ.ಜಿ.ವಿಕಾಸ್, ಆಕಾಶ್, ಗಂಗಾಧರ್, ಉಮೇಶ್, ಪ್ರದೀಪ, ಇರ್ಫಾನ್ ಮತ್ತು ಆಯೂಬ್‌ಖಾನ್ ಬಂಧಿತ ಆರೋಪಿಗಳು ಎಂದು ಎಸ್ಪಿ ವಿವರಿಸಿದರು. ಬಂಧಿತ ಆರೋಪಿಗಳೆಲ್ಲರೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದರು.

ಪರಮೇಶ್ ಮೇಲೆ 4 ಕೊಲೆ ಕೇಸ್ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಂದಲ್ಲ ಬರೋಬ್ಬರಿ 14 ಪ್ರಕರಣಗಳಿವೆ. ಎ2 ಪುನೀತ್ ವಿರುದ್ಧ 13 ಕೇಸ್‌ಗಳಿವೆ. ಹಾಗೆಯೇ ಕೊಲೆಯಾದ ಮಂಜೇಶ್ ಮೇಲೂರು 4 ಕೊಲೆ ಕೇಸ್ ಸೇರಿದಂತೆ 8 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಈ ನಡುವೆ ಮಂಜೇಶ್ ಕಡೆಯಿಂದ ಪರಮೇಶ್ ಮೇಲೆ 3 ಪ್ರಕರಣ ದಾಖಲಾಗಿದ್ದರೆ, ಪರಮೇಶ್ ಕಾರಣದಿಂದ ಮಂಜೇಶ್ ಮೇಲೆ 4 ಪ್ರಕರಣ ದಾಖಲಾಗಿವೆ.

ಆರಂಭದಲ್ಲಿ ಸ್ನೇಹಿತರಾಗಿದ್ದವರು ನಂತರ ಶತ್ರುಗಳಾಗಿದ್ದೇಕೆ ಎಂಬ ಬಗ್ಗೆ ತನಿಖೆ ಮುಂದುವರಿದಿದ್ದು, ಬಂಧಿತ ಆರೋಪಿಗಳೆಲ್ಲರೂ ಇನ್ನೂ ಪೊಲೀಸ್ ಕಸ್ಟಡಿಯಲ್ಲೇ ಇದ್ದು ವಿಚಾರಣೆ ಮುಂದುವರಿದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net