ವಿರೋಧದ ನಡುವೆಯೂ ಒತ್ತುವರಿ ತೆರವು

ಬೇಲೂರು ಪಟ್ಟಣದ ಹರ್ಡೀಕರ್ ವೃತ್ತದಲ್ಲಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಅನಧಿಕೃತವಾಗಿದ್ದ ಪೆಟ್ಟಿಗೆ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಬೇಲೂರು ಪಟ್ಟಣದ ಹರ್ಡೀಕರ್ ವೃತ್ತದಲ್ಲಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಅನಧಿಕೃತವಾಗಿದ್ದ ಪೆಟ್ಟಿಗೆ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • Encroachment
ಬೇಲೂರು: ಪಟ್ಟಣದ ಹರ್ಡೀಕರ್ ವೃತ್ತದ ಹೊಳೆಬೀದಿ ಪ್ರವೇಶಿಸುವ ತಾಲೂಕು ಪಂಚಾಯಿತಿಗೆ ಸೇರಿದ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ಪೊಲೀಸರ ನೆರವಿನೊಂದಿಗೆ ತಾಪಂ ಇಒ ಸತೀಶ್‌ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು.
ಮಂಗಳವಾರ ಬೆಳಗ್ಗೆ ಅಧಿಕಾರಿಗಳ ತಂಡ ಒತ್ತುವರಿ ತೆರವಿಗೆ ಮುಂದಾದಾಗ ಅಂಗಡಿ ಮಳಿಗೆದಾರರು ಆಕ್ಷೇಪ ವ್ಯಕ್ತಪಡಿಸಿದರು. ಹತ್ತಾರು ವರ್ಷಗಳಿಂದ ಮಳಿಗೆ ಮಾಡಿಕೊಂಡು ಜೀವನ ನಡೆಸುತಿದ್ದೇವೆ, ಈಗ ಏಕಾಏಕಿ ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು. ಪುರಸಭೆಯಿಂದ ನಮಗೆ ಮಳಿಗೆ ಮಾಡಿ ಕೊಡುತ್ತೇವೆಂದು ಮಾತು ಕೊಟ್ಟಿದ್ದಾರೆ. ಹಾಗಾಗಿ ನಾವು ತೆರವು ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದರು.
ಈ ಸಂದರ್ಭ ತಾಪಂ ಇಒ ಸತೀಶ್‌ಕುಮಾರ್ ಮತ್ತು ಮಳಿಗೆದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮದ್ಯೆ ಪ್ರವೇಶಿಸಿ ನಿಮ್ಮದು ಎಂಬುದಕ್ಕೆ ದಾಖಲೆಗಳಿದ್ದರೆ ಅಧಿಕಾರಿಗಳಿಗೆ ಕೊಡಿ, ನಾಲ್ಕು ಅಂಗಡಿಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕಾರಣ ಅವುಗಳನ್ನು ಹೊರತುಪಡಿಸಿ ಉಳಿದ ಮಳಿಗೆಗಳ ತೆರವಿಗೆ ಮುಂದಾಗಿದ್ದಾರೆ. ನಿಮ್ಮಲ್ಲಿ ದಾಖಲೆ ಇಲ್ಲದಿದ್ದರೆ ತೆರವುಗೊಳಿಸಲು ಬಿಡಿ ಎಂದು ತಿಳಿಸಿದ ಬಳಿಕ ತೆರವಿಗೆ ಸಹಕರಿಸಿದರು.
ಇಒ ಸತೀಶ್ ಕುಮಾರ್ ಮಾತನಾಡಿ, ತಾಪಂಗೆ ಸೇರಿದ ಜಾಗದಲ್ಲಿ ಕೆಲವರು ಅಕ್ರಮವಾಗಿ 12ಕ್ಕೂ ಅಧಿಕ ಅಂಗಡಿಗಳನ್ನು ಹಾಕಿಕೊಂಡಿದ್ದರು. ಇದನ್ನು ಈಗ ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಲಾಗುವುದು. ಇಲ್ಲಿನ ರಾಘವೇಂದ್ರ, ಶಿವಕುಮಾರ್, ಉಮೇಶ್ ಮತ್ತು ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದು, ಜೂ 4ರಂದು ವಿಚಾರಣೆ ಇದೆ. ತೀರ್ಪು ಬಂದ ನಂತರ ಉಳಿದ ಮಳಿಗೆಗಳ ತೆರವಿಗೆ ಮುಂದಾಗುತ್ತೇವೆ ಎಂದರು.
ಪಿಎಸ್‌ಐ ಶಿವನಗೌಡ ಪಾಟೀಲ್, ತಾಪಂ ಅಧಿಕಾರಿಗಳಾದ ತೊಪೇಗೌಡ, ನಂದಕುಮಾರ್, ಸಂತೋಷ್, ವಿಶ್ವನಾಥ್, ನಾಗಭೂಷಣ್, ಅವಿನಾಶ್, ಮಂಜುನಾಥ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net