ಚನ್ನರಾಯಪಟ್ಟಣದ ಒಂದನೇ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.ಪುರಸಭಾ ಮಾಜಿ ಸದಸ್ಯ ಜಿ.ಆರ್.ಸುರೇಶ್, ಮುಖಂಡರಾದ ಕೃಷ್ಣೆಗೌಡ, ನಾರಾಯಣ್, ನವೀನ್, ಮುಖಾನ್,್ ಶಿವು, ಕಿರಣ್, ಶೇಖರ್, ಮಂಜುನಾಥ್, ಯೋಗೀಶ್ ಸೇರಿದಂತೆ ಇತರರು ಇದ್ದರು.
ಚನ್ನರಾಯಪಟ್ಟಣ: ಪಟ್ಟಣದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ನೀಡಬೇಕೆಂದು ವಿಧಾನಸಭೆಯಲ್ಲಿ ಒತ್ತಾಯಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಅಂಬಿಕಾ ನಗರದಲ್ಲಿ ಸೋಮವಾರ ಸಿಸಿ ರಸ್ತೆ ಕಾಮಗಾರಿಗೆ ಹಾಗೂ 38 ಲಕ್ಷ ರೂ. ವೆಚ್ಚದಲ್ಲಿ ನದಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದ ವಸತಿ ಪ್ರದೇಶ ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿದೆ. ಪಟ್ಟಣದ ಸ್ವಚ್ಛತೆ ಉದ್ದೇಶದಿಂದ ಒಳಚರಂಡಿ ನಿರ್ಮಾಣ ಕಾಮಗಾರಿಗೆ 117 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದ್ದು, ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸಚಿವರನ್ನು ಪ್ರಶ್ನಿಸಿ ಅನುದಾನಕ್ಕೆ ಒತ್ತಾಯಿಸಲಾಗಿದೆ. ಈ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಮುಂದಿನ ಆರ್ಥಿಕ ವರ್ಷದಲ್ಲಿ ಅಂಬಿಕಾ ನಗರದ ಶ್ರೀರಾಮ ಮಂದಿರದ ಅಭಿವೃದ್ಧಿಗೆ ಎರಡೂವರೆ ಲಕ್ಷ ರೂ.ಅನುದಾನ ನೀಡಲಾಗುವುದು. ಗುರುಭವನದಿಂದ ಅಂಬಿಕಾ ನಗರಕ್ಕೆ 100 ಮೀಟರ್ ಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಎರಡನೇ ಹಂತದಲ್ಲಿ ಉಳಿಕೆ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಒಂದನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ನದಿ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ, ರಸ್ತೆ ಕಾಮಗಾರಿ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ಬಡಾವಣೆಯ ಮಕ್ಕಳಿಗೆ ಶಿಕ್ಷಣ ನೀಡಲು, ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೆ ಶಾಲೆ ನಿರ್ಮಾಣ ಮಾಡಲಾಗಿದೆ. ವಸತಿ ಪ್ರದೇಶ ವಿಸ್ತಾರವಾಗಿ ಬೆಳೆಯುತ್ತಿದ್ದು, ಅನುದಾನದ ಲಭ್ಯತೆ ಮೇರೆಗೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಕೆ-ಶಿಪ್ ಯೋಜನೆಯಡಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಗುರುಭವನದಿಂದ ನವೋದಯ ವೃತ್ತದವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ವಿಭಜಕ ಹಾಗೂ ವೃತ್ತಗಳು ಅಗಲವಾಗಿ ನಿರ್ಮಾಣಗೊಂಡ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ಮುಖ್ಯ ಕಾರ್ಯಪಾಲಕ ಅಭಿಯಂತರರನ್ನು ಕಾಮಗಾರಿ ಪರಿಶೀಲನೆಗೆ ಸೂಚಿಸಲಾಗಿದ್ದು, ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಸದಸ್ಯ ಜಿ.ಆರ್.ಸುರೇಶ್, ಮುಖಂಡರಾದ ಕೃಷ್ಣೆಗೌಡ, ನಾರಾಯಣ್, ನವೀನ್, ಮುಖಾನ್,್ ಶಿವು, ಕಿರಣ್, ಶೇಖರ್, ಮಂಜುನಾಥ್, ಯೋಗೀಶ್ ಸೇರಿದಂತೆ ಇತರರು ಇದ್ದರು.