ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬೇಡಿ

ಬೇಲೂರು ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕವ್ಯಸನ ಮುಕ್ತ ಭಾರತ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಪ್ರಾಂಶುಪಾಲ ಡಾ.ನಾಗೇಂದ್ರಪ್ಪ,  ಪಿಎಸ್‌ಎಐ ಶಿವನಗೌಡ ಪಾಟೀಲ್ ಇತರರು ಇದ್ದರು.
ಬೇಲೂರು ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕವ್ಯಸನ ಮುಕ್ತ ಭಾರತ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಪ್ರಾಂಶುಪಾಲ ಡಾ.ನಾಗೇಂದ್ರಪ್ಪ, ಪಿಎಸ್‌ಎಐ ಶಿವನಗೌಡ ಪಾಟೀಲ್ ಇತರರು ಇದ್ದರು.
Published on

ಬೇಲೂರು :

ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ, ಸಮಾಜಶಾಸ್ತ್ರ ವಿಭಾಗ, ರೆಡ್‌ಕ್ರಾಸ್ ಹಾಗೂ ಭೀಮ್ ಆರ್ಮಿ, ಭಾರತ್ ಏಕತಾ ಮಿಷನ್ ತಾಲೂಕು ಘಟಕ, ಅಬಕಾರಿ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾದಕ ವ್ಯಸನ ಮುಕ್ತ ಭಾರತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಆರೋಗ್ಯ ಪಾಲನೆ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಮನ ನೀಡಬೇಕು ಎಂದರು. ಮಾದಕ ವಸ್ತುಗಳ ಸೇವನೆಯಿಂದ ಸಾಕಷ್ಟು ಜನರು ಜೀವ ಕಳೆದು ಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್‌ಗೆ ದಾಸರಾಗುತ್ತಿರುವ ಪ್ರಕರಣ ಹೆಚ್ಚಾಗಿದೆ. ವಿದ್ಯಾರ್ಜನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಂಡು ಇತರರಿಗೂ ಮಾದರಿಯಾಗಬೇಕು ಎಂದರು.
ದ್ರೋಹಿಗಳಾಗುತ್ತಾರೆ:
ಪಿಎಸ್‌ಎಐ ಶಿವನಗೌಡ ಪಾಟೀಲ್ ಮಾತನಾಡಿ, ಮಾದಕವಸ್ತುಗಳನ್ನು ಸೇವಿಸುವವರು ದೇಶ ದ್ರೋಹಿಗಳಿಗೆ ಸಮ. ಮಾದಕ ವಸ್ತು ಸೇವನೆ ಹಾಗೂ ಮಾರಾಟ ಕಾನೂನಿಗೆ ವಿರುದ್ಧವಾಗಿದೆ ಎಂದರು.ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ, ಗುರಿ ಸಾಧನೆಗೆ ಮುಂದಾಗಬೇಕು ಎಂದರು. ಕಾಲೇಜು, ಅಂಗಡಿ, ಮುಂಗಟ್ಟು ಸೇರಿದಂತೆ ಇತರೆಡೆ ಯಾರಾದರೂ ಮಾದಕವಸ್ತುಗಳ ಸಂಗ್ರಹ, ಮಾರಾಟ ಅಥವಾ ಸೇವನೆಯಲ್ಲಿ ತೊಡಗಿದ್ದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಪ್ರಾಂಶುಪಾಲ ಡಾ.ನಾಗೇಂದ್ರಪ್ಪ ಮಾತನಾಡಿ, ಕ್ಷಣಿಕ ಸುಖಕ್ಕಾಗಿ ಯುವಜನರು ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಇಂಥವರು ಜೀವನ ನಿರ್ವಹಣೆಯಲ್ಲೂ ವಿಫಲರಾಗುತ್ತಾರೆಂದರು.

ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಪ್ರೇಮಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೇಲೂರು ಪಟ್ಟಣದಲ್ಲಿ ಮಾದಕವಸ್ತುಗಳ ಕಳ್ಳ ವ್ಯಾಪಾರ ಹಾಗೂ ಸೇವನೆ ಹೆಚ್ಚಾಗುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡು ಯುವಜನರನ್ನು ರಕ್ಷಿಸಬೇಕು ಎಂದರು.

ಅಬಕಾರಿ ಇಲಾಖೆ ಸಬ್ ಇನ್ಸ್‌ಪೆಕ್ಟರ್ ಸತೀಶ್, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಕುಸುಮಾ, ಉಪನ್ಯಾಸಕರಾದ ದೇವರಾಜ್, ಮರಿಯಾ ಪಿಂಟೊ, ಬಾಬು ಪ್ರಸಾದ್, ಮಂಜುನಾಥ್, ಮಧು, ವಸಂತ್ ಕುಮಾರ್, ಪವಿತ್ರಾ, ಲಕ್ಷ್ಮೀಶ್, ವೀರಭದ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net