ಬೇಲೂರು:ತಾಲೂಕಿನಾದ್ಯಂತ ಭಾನುವಾರ ಸಂಜೆಯಿಂದ ಸೋಮವಾರವೂ ಸಹ ಸೋನೆ ಮಳೆಯಿಂದಾಗಿ ಬೇಲೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಜನರು ಹರ್ಷಿತರಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ತಾಲೂಕಿನಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಉತ್ತಮವಾಗಿ ಬಾರದೆ ರೈತರು ಆತಂಕಕ್ಕೀಡಾಗಿದ್ದರು. ಜತೆಗೆ ಅಲ್ಪಸ್ವಲ್ಪ ಬಂದ ಮಳೆಯ ನಡುವೆಯೇ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗೆ ನೀರಿಲ್ಲದೆ ಆಕಾಶದತ್ತ ಮುಖ ಮಾಡುವಂತ್ತಾಗಿತ್ತು. ಆದರೆ ಬಾನುವಾರ ಸಂಜೆಯಿಂದ ಸೋನೆ ಮಳೆ ರೈತರಲ್ಲಿ ಕೊಂಚ ಸಂತಸ ಮೂಡಿಸಿದೆ.
ರೈತರೆಲ್ಲ ಜಮೀನಿನತ್ತ ಮುಖ ಮಾಡುವಂತ್ತಾಗಿದೆ. ಸೋಮವಾರ ಬರುತ್ತಿರುವ ಮಳೆ ಕೆಲ ಸಮಯ ಬಿಡುವು ನೀಡಿ ಪುನ, ಪ್ರಾರಂಭವಾಗುತಿತ್ತು. ವಿವಿಧ ಕೆಲಸ ಕಾರ್ಯಗಳಿಗೆ ಬೇಲೂರು ಪಟ್ಟಣಕ್ಕೆ ಆಗಮಿಸಿದ್ದ ಜನರು ಮಳೆಯ ನಡುವೆಯೇ ಓಡಾಡ ತೊಡಗಿದ್ದರು.