ಸಕಲೇಶಪುರ: ಎಚ್1 ಎನ್1 ಬಗ್ಗೆ ಅನಗತ್ಯ ಭಯ ಬೇಡ ಎಂದು ತಾಲೂಕು ಆರೋಗ್ಯಾಧಿಕಾರಿ ಕಿಶೋರ್ ಹೇಳಿದರು.
ರಾಜ್ಯದಲ್ಲಿ ಎಚ್1ಎನ್1 ಹರಡುತ್ತಿದ್ದು, ಇದೊಂದು ಸಂಕ್ರಾಮಿಕ ರೋಗವಾಗಿರುವುದರಿಂದ ಪರಸ್ಪರ ಹಸ್ತಲಾಘವ, ಸಾರ್ವಜನಿಕ ವಲಯದಲ್ಲಿ ಸೀನುವುದು ಸೇರಿದಂತೆ ಪರರಿಗೆ ಅಡ್ಡಿಯಾಗುವ ಯಾವ ಕೆಲಸವನ್ನೂ ಮಾಡದಿರುವ ಮೂಲಕ ರೋಗ ಹರಡುವಿಕೆಗೆ ಕಡಿವಾಣ ಹಾಕುವುದು ಅಗತ್ಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡ ವ್ಯಕ್ತಿಗಳು ಅನಗತ್ಯವಾಗಿ ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸುವುದನ್ನು ಸ್ವಯಂ ನಿರ್ಬಂಧಿಸಿಕೊಳ್ಳುವ ಅಗತ್ಯವಿದೆ. ಇದಲ್ಲದೆ ರೋಗ ಲಕ್ಷಣವುಳ್ಳವರು ಮಾಸ್ಕ್ ಧರಿಸುವ ಮೂಲಕ ಇತರರಿಗೆ ರೋಗ ಹರಡದಂತೆ ಜವಾಬ್ದಾರಿ ವಹಿಸಬೇಕು. ಜ್ವರ ಹಾಗೂ ಕೆಮ್ಮಿನ ಲಕ್ಷಣ ಇದ್ದವರು ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ಸೇವಿಸಬಾರದು. ಇದು ಪರ್ಯಾಯ ರೋಗಗಳಿಗೆ ಕಾರಣವಾಗಲಿದೆ ಎಂದರು.
ಈ ವೇಳೆ ಎಚ್1ಎನ್1 ರೋಗ ಹರಡದಂತೆ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಾಲೂಕು ಆರೋಗ್ಯ ಇಲಾಖೆ ಮೇಲ್ವಿಚಾರಕಿ ರತ್ನಮ್ಮ. ವೈದ್ಯ ದೇವರಾಜ್ ಮುಂತಾದವರಿದ್ದರು.