ಗಂಡಸಿ: ಇಂಗ್ಲಿಷ್ ಕಲಿಕೆ ಬಗ್ಗೆ ಪಾಲಕರಿಗೆ ಕಾಳಜಿ ಇರಲಿ. ಆದರೆ ಅತಿಯಾದ ವ್ಯಾಮೋಹ ಬೇಡ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.
ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿಯಿಂದ 6ನೇ ತರಗತಿಯವರೆಗೆ ಇಂಗ್ಲಿಷ್‌ನಲ್ಲಿ ಬೋಧಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ 7 ತರಗತಿಗೂ ಬೋಧನೆ ಇದಲಿದೆ ಎಂದರು.
ಖಾಸಗಿ ಶಾಲೆಗಳಿಗೆ ಪಾಲಕರು ಲಕ್ಷಾಂತರ ರೂ. ಡೊನೇಷನ್ ಕಟ್ಟಿ 25 ರಿಂದ 30 ಕಿ.ಮೀ. ದೂರದ ತಾಲೂಕು ಕೇಂದ್ರಕ್ಕೆ ಮಕ್ಕಳನ್ನು ಸೇರಿಸುವ ಬದಲು ಗ್ರಾಮದಲ್ಲೇ ನುರಿತ ಶಿಕ್ಷಕರಿಂದ ಉಚಿತ ಶಿಕ್ಷಣ, ಬಿಸಿಯೂಟ, ಕ್ಷೀರ ಭಾಗ್ಯ, ವಿದ್ಯಾರ್ಥಿ ವೇತನ, ಸಮವಸ್ತ್ರ ಪಡೆದು ಉಚಿತವಾಗಿ ದೊರೆಯುವ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು.
ಗಂಡಸಿ ಶಾಲೆಯಲ್ಲಿ ಮಕ್ಕಳ ದಾಖಲಾತಿ 206 ಇದ್ದು, ಪ್ರತಿ ವರ್ಷ ದಾಖಲಾತಿ ಗಣನೀಯವಾಗಿ ಹೆಚ್ಚುತ್ತಿದೆ. ಶಿಕ್ಷಕರ ಪರಿಶ್ರಮ, ಹಳೇ ವಿದ್ಯಾರ್ಥಿಗಳು, ಪಾಲಕರು ಗ್ರಾಮಸ್ಥರು ಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತಿರುವುದು ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಯ್ಯಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಾಜಿ ಉಪಾಧ್ಯಕ್ಷರಾದ ಕೋಟಿ ಪ್ರದೀಪ್, ನಾಗರಾಜ್, ಕುಮಾರ್, ಎಸ್‌ಡಿಎಂಸಿ ಸದಸ್ಯರಾದ ಮಹಾಲಿಂಗಪ್ಪ, ನೇತ್ರಾವತಿ, ವೀಣಾ, ಸಮಾಜ ಸೇವಕ ಚಂದ್ರಣ್ಣ ಇತರರಿದ್ದರು.