ನಾಯಿ ಕಡಿತ ಪ್ರಕರಣ ಹೆಚ್ಚಳ

ಚನ್ನರಾಯಪಟ್ಟಣದ ಕೃಷ್ಣರಾಜೇಂದ್ರ ವೃತ್ತದಲ್ಲಿ ಬೀದಿ ನಾಯಿಗಳು ಹಿಂಡಾಗಿ ನಿಂತಿರುವುದು.
ಚನ್ನರಾಯಪಟ್ಟಣದ ಕೃಷ್ಣರಾಜೇಂದ್ರ ವೃತ್ತದಲ್ಲಿ ಬೀದಿ ನಾಯಿಗಳು ಹಿಂಡಾಗಿ ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಐದು ವರ್ಷಗಳಲ್ಲಿ ಚನ್ನರಾಯಪಟ್ಟಣ ತಾಲೂಕಿನಲ್ಲಿ 19,861 ಪ್ರಕರಣ ದೃಢ
ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ನಾಯಿ ಕಡಿತ ಪ್ರಕರಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಐದು ವರ್ಷದಲ್ಲಿ 19,861 ಜನರು ನಾಯಿ ಕಡಿತದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬೀದಿ ನಾಯಿಗಳು ಮಾತ್ರವಲ್ಲದೆ ತರಬೇತಿಯಿಲ್ಲದ ಸಾಕು ನಾಯಿಗಳೂ ಸಹ ಕೆಲವೊಮ್ಮೆ ದಾಳಿ ಮಾಡುತ್ತಿದ್ದು, ಅನೇಕರು ರೇಬಿಸ್‌ನಂತಹ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ. ರೇಬಿಸ್ ಗಂಭೀರ ಮತ್ತು ಮಾರಕ ಕಾಯಿಲೆಯಾಗಿದ್ದು, ಸೋಂಕಿತ ಪ್ರಾಣಿಗಳ ಲಾಲಾರಸದ ಮೂಲಕ ಅಥವಾ ಮೆದುಳು ಅಥವಾ ಬೆನ್ನುಹುರಿಗೆ ಗಾಯವಾಗಿದ್ದರೆ ಅದು ಹರಡುತ್ತದೆ. ರೇಬಿಸ್ ನರಮಂಡಲದ ಮೂಲಕ ಮೆದುಳನ್ನು ತಲುಪುದರಿಂದ ಸಾವು ಸಂಭವಿಸಬಹುದು.
ನಾಯಿ ಕಡಿತ ಪ್ರಕರಣ ತಾಲೂಕಿನ ಎಲ್ಲ ಹೋಬಳಿಗಳಲ್ಲೂ ವರದಿಯಾಗುತ್ತಿವೆ. ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತಿವೆ. ಐದು ವರ್ಷಗಳಲ್ಲಿ ತಾಲೂಕಿನಾದ್ಯಂತ 19,861 ಪ್ರಕರಣಗಳು ದೃಢಪಟ್ಟಿವೆ. ಎಲ್ಲ ವಯೋಮಾನದವರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳ ದಾಳಿಯಿಂದ ಗಾಯಗೊಳ್ಳುತ್ತಿದ್ದಾರೆ. ಮೂರು ತಿಂಗಳಲ್ಲಿ ನಾಯಿ ಕಡಿತದಿಂದ ಒಬ್ಬರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ನಾಯಿ ಕಡಿತವನ್ನು 2021ರಲ್ಲಿ ಘೋಷಿತ ಕಾಯಿಲೆ ವ್ಯಾಪ್ತಿಗೆ ತಂದ ಹಿನ್ನೆಲೆಯಲ್ಲಿ ನಾಯಿ ಕಡಿತಕ್ಕೊಳಗಾದವರಿಗೆ ರೇಬಿಸ್ ಇಮ್ಯುನೋಗ್ಲಾಬ್ಯುಲಿನ್ ಚುಚ್ಚುಮದ್ದನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ.
ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳ ಮಾಹಿತಿ ಇಲಾಖೆಗೆ ಸಮರ್ಪಕವಾಗಿ ದೊರೆಯುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳೂ ನಿಯಮಿತವಾಗಿ ಪ್ರಕರಣಗಳ ವಿವರವನ್ನು ಇಲಾಖೆಗೆ ವರದಿ ಮಾಡುತ್ತಿರಲಿಲ್ಲ. ಇದರಿಂದಾಗಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ರೇಬಿಸ್ ಕಾಯಿಲೆಗೆ ಒಳಗಾಗುವವರ ಹಾಗೂ ಕಡಿತದಿಂದ ಮೃತಪಡುವವರ ಸಂಖ್ಯೆ ಹೆಚ್ಚಿತ್ತು. ಆದ್ದರಿಂದ, ನಾಯಿ ಕಡಿತವನ್ನು ಘೋಷಿತ ಕಾಯಿಲೆಯಡಿ ತಂದು ಎಲ್ಲ ಪ್ರಕರಣಗಳ ವಿವರವನ್ನು ಸಮಗ್ರ ಆರೋಗ್ಯ ಮಾಹಿತಿಯಡಿ (ಐಎಚ್‌ಐಪಿ) ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.
ಚಿಕಿತ್ಸೆ ಪಡೆಯದಿದ್ದಲ್ಲಿ ಅಪಾಯ: ನಾಯಿ ಕಚ್ಚಿದ್ದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಸಾಕು ಅಥವಾ ಬೀದಿ ನಾಯಿ ಕಚ್ಚಿದರೂ ನಿರ್ಲಕ್ಷ್ಯ ಮಾಡಬಾರದು. ನಾಯಿ ಕಡಿತದಿಂದಲೇ ರೇಬಿಸ್ ಕಾಣಿಸಿಕೊಳ್ಳುವುದು ಜಾಸ್ತಿ. ಈ ಸೋಂಕು ದೇಹದ ನರವ್ಯೆಹ ಸೇರಿದ ಬಳಿಕ ಬಲಿಷ್ಠಗೊಂಡು ವ್ಯಕ್ತಿಯನ್ನು ಘಾಸಿಗೊಳಿಸುತ್ತದೆ. ಹೀಗಾಗಿ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಬೇಕು. ಕಚ್ಚಿದ ಗಾಯವನ್ನು ಮೊದಲು ಶುದ್ಧ ನೀರಿನಿಂದ ತೊಳೆಯಬೇಕು. ಸಾಬೂನಿನಿಂದ ಗಾಯವನ್ನು ಶುಭ್ರಗೊಳಿಸಿದಲ್ಲಿ ಸೋಂಕು ದೇಹದ ನರವ್ಯೆಹ ಸೇರುವುದನ್ನು ತಡೆಯಲು ಸಾಧ್ಯವಾಗಲಿದೆ. ಗಾಯ ದೊಡ್ಡದಾಗಿದ್ದರೆ ಅಥವಾ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಶುದ್ಧ ಬಟ್ಟೆ ಕಟ್ಟಿ ಬಳಿಕ ಹತ್ತಿರದ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆಯಬೇಕು. ಅಲ್ಲದೆ ಯಾವುದೇ ಕಾರಣಕ್ಕೂ ನಾಯಿಯನ್ನು ಸಾಯಿಸಬಾರದು.
ಕರ್ನಾಟಕದಲ್ಲಿ ರೇಬಿಸ್ ಅನ್ನು ಅಧಿಸೂಚಿತ ಕಾಯಿಲೆ ಎಂದು ಸರ್ಕಾರ ಘೋಷಿಸಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆ ಮತ್ತು ಒಂದು ಬಾರಿ ಅಶ್ವ ಮೂಲದ ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಅನ್ನು ಉಚಿತವಾಗಿ ಸಕಾಲದಲ್ಲಿ ನೀಡಬೇಕಿದೆ. ಈ ನಿರ್ದೇಶನ 2030ರ ವೇಳೆಗೆ ರೇಬಿಸ್‌ನಿಂದ ಮಾನವ ಸಾವು ಭಾರತದಲ್ಲಿ ಶೂನ್ಯಕ್ಕೆ ಇಳಿಯಲಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ 2007ರ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳು ನಿರ್ದಿಷ್ಟ ಜವಾಬ್ದಾರಿ ಹೊಂದಿವೆ. ನಾಯಿ, ಇತರ ಪ್ರಾಣಿಗಳು ಮತ್ತು ಹಾವು ಕಡಿತದ ಸಂತ್ರಸ್ತರಿಗೆ ಮುಂಗಡ ಹಣವನ್ನು ಕೇಳದೆ, ತಕ್ಷಣ ಪ್ರಥಮ ಚಿಕಿತ್ಸೆ ಮತ್ತು ಜೀವ ಉಳಿಸುವ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳು ಒದಗಿಸಬೇಕು. ಸೂಕ್ತ ಸೌಲಭ್ಯಗಳಿಲ್ಲದಿದ್ದರೆ, ಬೇರೆಡೆಗೆ ಕಳುಹಿಸುವ ಮೊದಲು ರೋಗಿಯನ್ನು ಸ್ಥಿರಗೊಳಿಸಬೇಕು ಎಂದು ಸುತ್ತೋಲೆಯಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net