ಅಕ್ರಮ ತಡೆಗೆ ಬ್ಯಾಂಕ್ ಖಾತೆ ಕೆವೈಸಿ ಮಾಡಿಸಿ

ಬೇಲೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಬ್ಯಾಂಕ್ ಖಾತೆದಾರರು ಸುರಕ್ಷಿತ ವ್ಯವಹಾರ ನಡೆಸಲು ಕೆವೈಸಿ ಪ್ರಕ್ರಿಯೆ ನಡೆಸಲು ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಲತಾ ಸರಸ್ವತಿ, ದೇವರಾಜು, ಬಿ.ಎ.ವಿರೂಪಾಕ್ಷ, ಕಿಶೋರ್ ಕುಮಾರ್ ಇತರರು ಇದ್ದರು.
ಬೇಲೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಬ್ಯಾಂಕ್ ಖಾತೆದಾರರು ಸುರಕ್ಷಿತ ವ್ಯವಹಾರ ನಡೆಸಲು ಕೆವೈಸಿ ಪ್ರಕ್ರಿಯೆ ನಡೆಸಲು ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಲತಾ ಸರಸ್ವತಿ, ದೇವರಾಜು, ಬಿ.ಎ.ವಿರೂಪಾಕ್ಷ, ಕಿಶೋರ್ ಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ ಹೇಳಿಕೆ
  • ಜಾಗೃತಿ ಜಾಥಾಕ್ಕೆ ಚಾಲನೆ
ಬೇಲೂರು: ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳನ್ನು ಸಕ್ರಿಯವಾಗಿರಿಸಿಕೊಂಡು ಸುರಕ್ಷಿತ ವ್ಯವಹಾರ ನಡೆಸಲು ಕಡ್ಡಾಯವಾಗಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ ಹೇಳಿದರು. 
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಯಂತೆ ಪ್ರತಿಯೊಬ್ಬ ಬ್ಯಾಂಕ್ ಖಾತೆದಾರರು ತಮ್ಮ ಗುರುತಿನ ಹಾಗೂ ವಿಳಾಸದ ದಾಖಲೆಗಳನ್ನು ನವೀಕರಿಸಬೇಕಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ, ನಕಲಿ ಖಾತೆ, ಹಣಕಾಸು ಅಕ್ರಮಗಳನ್ನು ತಡೆಯಲು ಕೆವೈಸಿ ಅತ್ಯಂತ ಪ್ರಮುಖವಾಗಿದೆ ಎಂದರು.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಪಾಸ್‌ಪೋರ್ಟ್ ಸೇರಿದಂತೆ ಇತರ ದಾಖಲೆಗಳೊಂದಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕೆವೈಸಿ ನವೀಕರಣ ಮಾಡಿಸಬಹುದು. ಕೆಲವು ಬ್ಯಾಂಕ್‌ಗಳಲ್ಲಿ ಆನ್‌ಲೈನ್ ಮೂಲಕವೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಇದೆ. ವಿಶೇಷವಾಗಿ ಹಿರಿಯ ನಾಗರಿಕರು, ಪಿಂಚಣಿ ಪಡೆಯುವವರು ಹಾಗೂ ಗ್ರಾಮೀಣ ಭಾಗದ ಖಾತೆದಾರರು ಕೆವೈಸಿ ನವೀಕರಣ ಮಾಡಿಸಿಕೊಳ್ಳುವುದರಿಂದ ಸರ್ಕಾರದ ಸೌಲಭ್ಯಗಳು ನಿರಂತರವಾಗಿ ಸಿಗಲು ಸಾಧ್ಯವಾಗಲಿದೆ ಎಂದರು.
ಜಾಗೃತಿ ಜಾಥಾದಲ್ಲಿ ತಾಲೂಕಿನ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಭಾಗವಹಿಸಿ ಜನರಿಗೆ ಕೆವೈಸಿ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ, ಸುರಕ್ಷಿತ ಬ್ಯಾಂಕಿಂಗ್ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಜಾಥಾದಲ್ಲಿ ವ್ಯವಸ್ಥಾಪಕರಾದ ದೇವರಾಜು, ತಾಲೂಕು ಆರ್ಥಿಕ ಸಾಕ್ಷರತಾ ಸಂಯೋಜಕ ಬಿ.ಎ.ವಿರೂಪಾಕ್ಷ, ಲೀಡ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಕಿಶೋರ್ ಕುಮಾರ್, ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ಸುಜಿತ್ ಕುಮಾರ್, ಮಾನಸಾ, ಪ್ರದೀಪ್ ಕುಮಾರ್, ಅಭಿಲಾಷ್ ಸೇರಿದಂತೆ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕ್‌ನ 38 ಬ್ಯಾಂಕ್‌ಗಳ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net