ಅರಸೀಕೆರೆ: ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ಕೋಮು ಸೌಹಾರ್ದತೆ ಕದಡುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಾನು ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಯಾವುದೇ ಕೋಮು ಸಂಘರ್ಷಗಳು ಉಂಟಾಗಲು ಅವಕಾಶ ಕೊಟ್ಟಿಲ್ಲ. ಕಳೆದ ಶುಕ್ರವಾರ ಯಾದಾಪುರ ಜೇನುಕಲ್ ಸಿದ್ದೇಶ್ವರ ಜಾತ್ರೆಯಿಂದ ವಾಪಸ್ ಬರುತ್ತಿದ್ದ ಯುವಕನ ಮೇಲೆ ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ಅವರ ಪುತ್ರ ಹಲ್ಲೆ ಮಾಡಿದ್ದು ಸರಿಯಲ್ಲ. ಈ ಸಂಬಂಧ ಪೊಲೀಸರು ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ. ಈ ಬಳಿಕವೂ ಹಿಂದೂ ಪರ ಸಂಘಟನೆಗಳು ನಗರ ಬಂದ್ ಕರೆ ಕೊಟ್ಟು ಕೋಮು ಭಾವನೆ ಕೆರಳಿಸುವ ರೀತಿ ವರ್ತಿಸಿದ್ದು ಅಕ್ಷಮ್ಯ. ಪ್ರತಿಭಟನೆ ಹೆಸರಿನಲ್ಲಿ ಸಾಮಾನ್ಯ ಜನರಿಗೆ ತೊಂದರೆ ಕೊಡಬಾರದು. ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿ ಜನರ ದಾರಿ ತಪ್ಪಿಸಬಾರದು. ರಾಜಕೀಯ ಕಾರಣಕ್ಕೆ ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ನಗರಸಭೆಯಲ್ಲಿ ಖಾತೆ ಬಿಡುಗಡೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ಇದು ಸುಳ್ಳು ಸುದ್ದಿ. ಯಾವುದೇ ಲೋಪವಾಗಿಲ್ಲ ಎಂದು ಈಗಾಗಲೇ ಪೌರಾಯಕ್ತರು ಸ್ಪಷ್ಟನೆ ಕೊಟ್ಟಿದ್ದಾರೆ. ಆದಾಗ್ಯೂ ಅಪಪ್ರಚಾರ ಮಾಡುತ್ತಿರುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್, ಎಪಿಎಂಸಿ ಮಾಜಿ ಸದಸ್ಯ ರಾಮಚಂದ್ರ ಇನ್ನಿತರರು ಇದ್ದರು.