ಆಶ್ರಯ ನಿವೇಶನಗಳು ನಿಯಮಾನುಸಾರ ವಿತರಣೆ

ಅರಕಲಗೂಡು ಪಪಂ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಎ.ಮಂಜು ಮಾತನಾಡಿದರು. ಕೆ.ಸಿ.ಸೌಮ್ಯಾ, ನಾಗೇಂದ್ರಕುಮಾರ್, ಶ್ರೀನಿವಾಸ್ ಇದ್ದರು.
ಅರಕಲಗೂಡು ಪಪಂ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಎ.ಮಂಜು ಮಾತನಾಡಿದರು. ಕೆ.ಸಿ.ಸೌಮ್ಯಾ, ನಾಗೇಂದ್ರಕುಮಾರ್, ಶ್ರೀನಿವಾಸ್ ಇದ್ದರು.
Published on
ಅರಕಲಗೂಡು: ಪಪಂ ವ್ಯಾಪ್ತಿಯ ಹಂಪಾಪುರ ಬಳಿ ಮೀಸಲಿರಿಸಿರುವ 353 ಆಶ್ರಯ ನಿವೇಶನಗಳನ್ನು ಸರ್ಕಾರದ ನಿಯಮಾನುಸಾರ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಶಾಸಕ ಎ.ಮಂಜು ತಿಳಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ 353 ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕಾನೂನು ಪ್ರಕಾರ ಅರ್ಹರಾಗಿರುವ ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿದ್ದವರೂ ಸಹ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಶಾಸಕ ಎ.ಮಂಜು ಸ್ಪಷ್ಟಪಡಿಸಿದರು. ಹಳೆಯ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರ್ಕಾರದ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಅರ್ಹರನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಎಸ್‌ಸಿ ಮತ್ತು ಎಸ್‌ಟಿ, ಮಹಿಳೆಯರು, ಅಂಗವಿಕಲರು ಹಾಗೂ ಸೈನಿಕರಿಗೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣದಂತೆ ಅರ್ಜಿಗಳನ್ನು ಪರಿಶೀಲಿಸಿ, ಅರ್ಹತಾ ಮಾನದಂಡಗಳನ್ನು ಪೂರೈಸುವವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ವಿಜಯ್ ಕುಮಾರ್ ಹಾಗೂ ಮುಸಾವಿರ್ ಪಾಷಾ ಅವರು, ಈ ಹಿಂದೆ ಸಿದ್ಧಪಡಿಸಿದ್ದ ಆಯ್ಕೆ ಪಟ್ಟಿಯನ್ನೇ ಪರಿಗಣಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಕುಮಾರ್ ಸರ್ಕಾರದ ನಿಯಮಾನುಸಾರ ಅರ್ಜಿಗಳನ್ನು ಆರು ತಿಂಗಳೊಳಗೆ ಪ್ರಕ್ರಿಯೆಗೊಳಿಸಬೇಕು. ಆ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳದ ಅರ್ಜಿಗಳನ್ನು ಸರ್ಕಾರ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.
ಅಲ್ಲದೆ, ಹಿಂದಿನ ವರ್ಷಗಳ ಆದಾಯ ಮಿತಿ, ಮೀಸಲಾತಿ ಹಾಗೂ ಇತರ ಅರ್ಹತಾ ಮಾನದಂಡಗಳಲ್ಲಿ ಬದಲಾವಣೆಗಳಾಗಿರು ವುದರಿಂದ ಪ್ರಸ್ತುತ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಹೊಸ ಅರ್ಜಿಗಳನ್ನೇ ಪರಿಗಣಿಸಲಾಗುವುದು ಎಂದರು.
ಅರ್ಜಿ ಸಲ್ಲಿಸಲು ಅಗತ್ಯವಾದ ಮಾನದಂಡಗಳ ಕುರಿತು ಫ್ಲೆಕ್ಸ್‌ಅನ್ನು ಪಟ್ಟಣದಲ್ಲಿ ಅಳವಡಿಸಲಾಗುವುದು. ಅದರ ಆಧಾರದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯೆ ರಾಧಾ, ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಸೌಮ್ಯಾ, ತಾಪಂ ಇಒ ಶ್ರೀನಿವಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net