ಅನಗತ್ಯವಾಗಿ ಸಾರ್ವಜನಿಕರನ್ನು ಅಲೆಸಿದರೆ ಶಿಸ್ತು ಕ್ರಮ

ಬೇಲೂರಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು. ಮಂಜುನಾಥ್, ಹೇಮಲತಾ, ಗೋಪಿ, ಶ್ರೀಧರ್ ಕಂಕನವಾಡಿ, ರೇವಣ್ಣ ಇದ್ದರು.
ಬೇಲೂರಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು. ಮಂಜುನಾಥ್, ಹೇಮಲತಾ, ಗೋಪಿ, ಶ್ರೀಧರ್ ಕಂಕನವಾಡಿ, ರೇವಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ
  • ತಾಲೂಕು ಕಚೇರಿ ಸಭಾಂಗಣ
ಬೇಲೂರು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಜನಸ್ಪಂದನ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ ನೂರಾರು ಜನರು ಕಂದಾಯ ಇಲಾಖೆಯ ಸಮಸ್ಯೆ ಸೇರಿದಂತೆ ವಿವಿಧ ಇಲಾಖೆಯಲ್ಲಿನ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಡಿಸಿ, ಕೆಲ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿರು. ಸಾರ್ವಜನಿಕರ ಸಮಸ್ಯೆಗಳನ್ನು ವಿಳಂಬ ಮಾಡದೆ ಬಗೆಹರಿಸಬೇಕು. ಪ್ರತಿ ತಿಂಗಳ ಮೂರನೇ ಶನಿವಾರ ತಾಲೂಕು ಮಟ್ಟದ ಜನಸ್ಪಂದನ ಸಭೆ ನಡೆಯಲಿದ್ದು, ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿವಿಧ ಸಮಸ್ಯೆಗಳೊಳಗೊಂಡಂತೆ 150 ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಹೆಚ್ಚು ಕಂದಾಯ ಇಲಾಖೆಯದ್ದಾಗಿದೆ. ಜಮೀನಿಗೆ ತೆರಳುವ ದಾರಿ ಸಮಸ್ಯೆ, ಸರ್ಕಾರಿ ಆಸ್ತಿ ಒತ್ತುವರಿ, ಕೆರೆ ಕಟ್ಟೆಗಳ ಒತ್ತುವರಿ, ರುದ್ರಭೂಮಿ, ಮಾಸಾಶನ, ಸರ್ವೇ, ಮಕ್ಕಳಿಂದ ಅನ್ಯಾಯ... ಹೀಗೆ ನಾನಾ ಸಮಸ್ಯೆಗಳನ್ನು ಹೊತ್ತ ಸಾರ್ವಜನಿಕರು ಜಿಲ್ಲಾಧಿಕಾರಿ ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು. ಪುರಸಭೆ ವ್ಯಾಪ್ತಿಯ ಕೆಲ ವಾರ್ಡ್‌ನಲ್ಲಿ ಕೊಳಚೆಯಿಂದಾಗಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದ್ದು, ಶೀಘ್ರ ಸರಿಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ಡಿಸಿ ತಾಕೀತು ಮಾಡಿದರು.
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅಯಾ ತಾಲೂಕು ಮಟ್ಟದಲ್ಲಿಯೇ ಜನಸ್ಪಂದನ ಸಭೆ ನಡೆಯುತ್ತಿದೆ. ಹೀಗಾಗಿ ಹಾಸನಕ್ಕೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳು ಬಂದಿವೆ. ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾರ್ವಜನಿಕರನ್ನು ಅಲೆಯುವಂತೆ ಮಾಡಿದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಕೆಲ ಭಾಗದಲ್ಲಿ ಕೆರೆ ಕಟ್ಟೆಗಳು, ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಿದ ಬಗ್ಗೆ ಅರ್ಜಿಗಳು ಬಂದಿವೆ. ಸ್ಥಳೀಯರು ಸಹಕಾರ ನೀಡಿದರೆ ಖಂಡಿತಾ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ಹಾಸನ ಉಪ ವಿಭಾಗಧಿಕಾರಿ ಮಂಜುನಾಥ್, ಭೂ ಪರಿವರ್ತನಾ ಜಿಲ್ಲಾ ಸಹಾಯಕ ಅಧಿಕಾರಿ ಹೇಮಾಲತಾ, ಅರಸೀಕೆರೆ ಡಿವೈಎಸ್‌ಪಿ ಗೋಪಿ, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net