ಬೆಲೆ ಹೆಚ್ಚಿಸಿ, ಎಲ್ಲ ಗ್ರೇಡ್ ಬೇಲ್‌ಗಳ ಖರೀದಿಗೆ ಆಗ್ರಹ

ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ   ಅಹೋರಾತ್ರಿ ಧರಣಿ ಆರಂಭಿಸಿದರು.
ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದರು.
Published on
ಅರಕಲಗೂಡು : ಹೊಗೆಸೊಪ್ಪು ಬೆಲೆ ಏರಿಕೆ ಮಾಡಿ ಎಲ್ಲ ಗ್ರೇಡ್ ಬೇಲ್‌ಗಳನ್ನು ಕೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆ ಆವರಣದಲ್ಲಿ ಅಡುಗೆ ತಯಾರಿಸಿ ಅಹೋರಾತ್ರಿ ಧರಣಿ ಆರಂಭಿಸಿದರು.
ತಂಬಾಕಿಗೆ ವೈಜ್ಞಾನಿಕ ಬೆಲೆ ನೀಡಿ ಸ್ಥಿರ ದರ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಆರಂಭದಲ್ಲಿ 320 ರೂ. ದರ ನೀಡಿದ್ದು ತದನಂತರದ ಹರಾಜಿನಲ್ಲಿ ಬೇಕಾಬಿಟ್ಟಿ ಬೆಲೆ ನೀಡಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಕೆಳ ದರ್ಜೆಯ ಬೇಲ್‌ಗಳನ್ನು ಖರೀದಿಸದೆ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಒಮ್ಮೆ ಮಾರುಕಟ್ಟೆಗೆ ತಂದ ಬೇಲ್‌ಗಳನ್ನು ಬಿಡ್ ಮಾಡದೆ ಮನಸ್ಸೋಇಚ್ಛೆ ತಿರಸ್ಕರಿಸಿ ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ ರೈತರು ಮತ್ತೆ ಬೇಲ್‌ಗಳನ್ನು ಮಾಡಿ ಮಾರುಕಟ್ಟೆಗೆ ತಂದು ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡುವಷ್ಟರಲ್ಲಿ ಹೈರಾಣರಾಗುತ್ತಿದ್ದು ಮಾರುಕಟ್ಟೆಯಲ್ಲಿ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ. ಬೆಳೆಗಾರರ ಹಿತ ಕಾಯಬೇಕಿದ್ದ ತಂಬಾಕು ಮಂಡಳಿ ನಿಷ್ಕ್ರಿಯವಾಗಿದ್ದು ಕಂಪನಿಗಳ ವರ್ತಕರ ಕೈಗೊಂಬೆಯಾಗಿ ವರ್ತಿಸುತ್ತಿದೆ. ಈ ಮೂಲಕ ಅನ್ನದಾತರನ್ನು ಶೋಷಣೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಸಂಸದರು ಮತ್ತು ಶಾಸಕರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಸಭೆ ನಡೆಸಿ ಹೊಗೆಸೊಪ್ಪು ಬೆಲೆ ಏರಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರೂ ಕಿಂಚಿತ್ತೂ ಉಪಯೋಗವಾಗಿಲ್ಲ. ಸಂಸತ್ ಅಧಿವೇಶನದಲ್ಲಿ ಸಂಸದರಾದ ಯದುವೀರ್ ಮತ್ತು ಶ್ರೇಯಸ್ ಪಟೇಲ್ ಅವರು ಹೊಗೆಸೊಪ್ಪು ಬೆಳೆಗಾರರ ಪರ ಧ್ವನಿ ಎತ್ತಿದರೂ ಸಚಿವರು ಉತ್ತರ ನೀಡದೆ ನಿರ್ಲಕ್ಷ್ಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ತಂಬಾಕು ಬೆಳೆಗಾರರನ್ನು ಬೀದಿಗೆ ತಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭಾರತದಲ್ಲಿ ಉತ್ಪಾದಿಸಿದ ತಂಬಾಕು ಖರೀದಿಸಲು ವಿದೇಶಿ ಕಂಪನಿಗಳಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು. ಸರ್ಕಾರ ತಂಬಾಕು ಬೆಳೆಗಾರರ ನೆರವಿಗೆ ಬರುವ ತನಕ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದರು.
ಭಾರತೀಯ ಕಿಸಾನ್ ಸಂಘದ ಮಂಡ್ಯ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜ್, ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಲ್ಲಪ್ಪ, ಉಪಾಧ್ಯಕ್ಷ ಸಣ್ಣೇಗೌಡ, ತಾಲೂಕು ಗೌರವಾಧ್ಯಕ್ಷ ಯೋಗಣ್ಣ, ತಾಲೂಕು ಅಧ್ಯಕ್ಷ ಬಿ.ಸಿ. ರವಿ, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಜಗನ್ನಾಥ್, ಕಾರ್ಯಾಧ್ಯಕ್ಷ ವೀರೇಂದ್ರ, ಖಜಾಂಚಿ ವೇದಾನಂದ, ಮಲ್ಲೇಶ್, ತಮ್ಮೇಗೌಡ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net