ಹೊಗೆಸೊಪ್ಪಿಗೆ ಉತ್ತಮ ಬೆಲೆ ನೀಡಲು ಆಗ್ರಹ

ಅರಕಲಗೂಡಿನಲ್ಲಿ ಬುಧವಾರ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಎಸ್.ವಿ.ಯೋಗಣ್ಣ ಮಾತನಾಡಿದರು. ಬಿ.ಸಿ.ರವಿ, ಮಂಜು, ವೀರೇಂದ್ರ, ಸಂಜು, ವೇದಮೂರ್ತಿ ಇದ್ದರು.
ಅರಕಲಗೂಡಿನಲ್ಲಿ ಬುಧವಾರ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಎಸ್.ವಿ.ಯೋಗಣ್ಣ ಮಾತನಾಡಿದರು. ಬಿ.ಸಿ.ರವಿ, ಮಂಜು, ವೀರೇಂದ್ರ, ಸಂಜು, ವೇದಮೂರ್ತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಳೆಯಿಂದ ಅಹೋರಾತ್ರಿ ಧರಣಿ
  • ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಎಸ್.ವಿ.ಯೋಗಣ್ಣ ಮಾಹಿತಿ
ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಗ್ರೇಡ್‌ಗಳ ಹೊಗೆಸೊಪ್ಪಿಗೆ ಉತ್ತಮ ಬೆಲೆ ನೀಡಿ ಖರೀದಿಸುವಂತೆ ಆಗ್ರಹಿಸಿ ಏ.3ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ಎಸ್.ವಿ.ಯೋಗಣ್ಣ ತಿಳಿಸಿದರು.
ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಆರಂಭವಾಗಿ ಆರು ತಿಂಗಳು ಕಳೆದರೂ ಸ್ಥಿರ ಬೆಲೆ ಏರಿಕೆ ಆಗದೆ ಪಾತಾಳಕ್ಕೆ ಕುಸಿದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ಯದುವೀರ್, ಶ್ರೇಯಸ್ ಪಟೇಲ್ ಹಾಗೂ ಶಾಸಕ ಎ.ಮಂಜು ಅವರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಉನ್ನತ ಮಟ್ಟದ ಸಭೆ ನಡೆಸಿ ಬೆಲೆ ಏರಿಕೆ ಮಾಡುವಂತೆ ಕೇಳಿಕೊಂಡರೂ ಕಿಂಚಿತ್ತೂ ದರ ಏರಿಕೆ ಮಾಡಿಲ್ಲ. ಬೆಳೆಗಾರರ ಹಿತ ಕಾಯಬೇಕಿದ್ದ ಮಂಡಳಿ ಕಾಟಾಚಾರದ ಸಭೆ ನಡೆಸಿ ಕಣ್ಮುಚ್ಚಿ ಕುಳಿತುಕೊಳ್ಳುತ್ತಿದೆ. ರೈತರ ಮೇಲೆ ಕಾಳಜಿ ಇದ್ದರೆ ಸಂಸದರು ಮತ್ತು ಶಾಸಕರು ಬೀದಿಗಿಳಿದು ರೈತರ ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರಕ್ಕೆ ತಂಬಾಕು ರಫ್ತಿನಿಂದ ಪ್ರತಿ ವರ್ಷ 45 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ತಂಬಾಕು ಖರೀದಿಸಿದ ಐಟಿಸಿ ಕಂಪನಿ ಹೆಮ್ಮರವಾಗಿ ಬೆಳೆದು ಶ್ರೀಮಂತವಾಗಿದೆ. ಆದರೆ ಕಷ್ಟಪಟ್ಟು ಬೆಳೆದು ಹೊಗೆಸೊಪ್ಪು ಮಾರಾಟ ಮಾಡಿ ಸಾಲ ಮಾಡಿಕೊಂಡಿರುವ ರೈತರಿಗೆ ಪ್ರೋತ್ಸಾಹ ಧನ ನೀಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ತಂಬಾಕಿಗೆ ಉತ್ತಮ ಬೆಲೆ ನೀಡದಿದ್ದರೆ ಬೆಳೆಗಾರರಿಗೆ ಪರಿಹಾರ ನೀಡಿ ಒಂದು ವರ್ಷ ಬೆಳೆ ರಜೆ ಘೋಷಿಸಲಿ. ಸಾಧ್ಯವಾದರೆ ಬೆಳೆ ನಿಷೇಧಿಸಿ ರೈತರಿಗೆ ನೆರವಾಗಲಿ ಎಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಬಿ.ಸಿ.ರವಿ ಮಾತನಾಡಿ, ಮಂಡಳಿ ಮತ್ತು ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ತನಕ ಅಹೋರಾತ್ರಿ ಧರಣಿ ಮಾಡಲಿದ್ದೇವೆ ಎಂದರು.
ಸಂಘದ ಮಂಜು, ವೀರೇಂದ್ರ, ಸಂಜು, ವೇದಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net