ಪರಿಸರ ದಿನದ ಪ್ರಯುಕ್ತ ಅರಣ್ಯ ಇಲಾಖೆಯ ನೌಕರರಾಗಿದ್ದ ದಿ.ನಾಗರಾಜ್ ನಿವಾಸಕ್ಕೆ ಭೇಟಿ ನೀಡಿದ ದೇಶಭಕ್ತರ ಬಳಗದ ಪದಾಧಿಕಾರಿಗಳು ಮೃತರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಲಾವಣ್ಯ, ಧರ್ಮ ಪ್ರಕೃತಿ, ಮೋಹನ್ ಇತರರಿದ್ದರು.
ಬೇಲೂರು:ಅರಣ್ಯ ಇಲಾಖೆ ನೌಕರನಾಗಿ ಕೆಲಸ ನಿರ್ವಹಿಸುತ್ತಲೇ ಜನರಿಗೆ ಪರಿಸರ ಜಾಗೃತಿ ಮೂಡಿಸಿ, ಪರಿಸರ ಸಂರಕ್ಷಣೆಗೆ ಜೀವನವನ್ನೇ ಮುಡಿಪಾಗಿಟ್ಟಿದ್ದ ಅರಣ್ಯ ಇಲಾಖೆಯ ನೌಕರ ದಿ.ನಾಗರಾಜ್ ಎಂದು ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಬಣ್ಣಿಸಿದರು.
ಅರಣ್ಯ ಇಲಾಖೆಯ ನೌಕರ ದಿ.ನಾಗರಾಜ್ ಅವರ ನಿವಾಸಕ್ಕೆ ಭಾನುವಾರ ಸಂಜೆ ಭೇಟಿ ನಿಡಿ ಮೃತರ ಬಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿ ಮಾತನಾಡಿದರು.
ಮನುಷ್ಯ ತನ್ನ ಸ್ವಾರ್ಥ ಮತ್ತು ಲಾಲಸೆಯಿಂದ ಪ್ರಕೃತಿ ಮತ್ತು ಪರಿಸರದ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶುದ್ಧ ಗಾಳಿ ಪಡೆಯುವುದೂ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಬೇಸರ ವ್ಯಕ್ತ ಪಡಿಸಿದರು.
ಸ್ವಚ್ಛ ಪರಿಸರ, ಶುದ್ಧ ಗಾಳಿ ಹಾಗೂ ಕುಡಿಯುವ ನೀರು ಮಾನವನ ಆರೋಗ್ಯಕರ ಬದುಕಿಗೆ ಅಗತ್ಯವಾಗಿದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ನೌಕರನಾಗಿದ್ದುಕೊಂಡೆ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಗಿಡಗಳನ್ನು ನೆಡಿಸುವಲ್ಲಿ ದಿ.ನಾಗರಾಜ್ ಪಾತ್ರ ಮಹತ್ತರದ್ದಾಗಿತ್ತು. ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಮಾಡಿರುವ ಕೆಲಸಗಳು ನಮ್ಮ ಮುಂದಿವೆ ಎಂದರು.
ದೇಶಭಕ್ತರ ಬಳಗದ ಕಾರ್ಯದರ್ಶಿ, ಮಹೇಶ್ ಮಾತನಾಡಿ, ಮಾನವ ತನ್ನ ದುರಾಸೆಯಿಂದ ವನ್ಯಜೀವಿಗಳ ವಾಸಸ್ಥಾನಗಳನ್ನು ಅತಿಕ್ರಮಿಸುತ್ತಿರುವ ಪರಿಣಾಮ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯ ಅತಿರೇಕದಿಂದ ಅನೇಕ ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಅರಣ್ಯ ಇಲಾಖೆ ನೌಕರ ದಿ.ನಾಗರಾಜ್ ಪತ್ನಿ ಲಾವಣ್ಯ, ಉಪನ್ಯಾಸಕ ಧರ್ಮ ಪ್ರಕೃತಿ, ಮೋಹನ್, ದೇಶಭಕ್ತರ ಬಳಗದ ಪ್ರಕಾಶ್, ಯೋಗೇಶ್ ಇತರರಿದ್ದರು.